ADVERTISEMENT

ಸಿಪಿಎಲ್‌ನಲ್ಲಿ ಆಡಲಿರುವ ಗೇಲ್‌, ಶಕೀಬ್‌, ಪ್ಲೆಸಿ

ಪಿಟಿಐ
Published 27 ಮೇ 2021, 16:09 IST
Last Updated 27 ಮೇ 2021, 16:09 IST
ಕ್ರಿಸ್ ಗೇಲ್ –ರಾಯಿಟರ್ಸ್ ಚಿತ್ರ
ಕ್ರಿಸ್ ಗೇಲ್ –ರಾಯಿಟರ್ಸ್ ಚಿತ್ರ   

ಗ್ರಾಸ್ ಐಲೆಟ್, ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್‌, ಬಾಂಗ್ಲಾದೇಶದ ಆಲ್‌ ರೌಂಡರ್ ಶಕೀಬ್ ಅಲ್ ಹಸನ್ ಮತ್ತು ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್ ಫಫ್ ಡು ಪ್ಲೆಸಿ ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್‌ (ಸಿಪಿಎಲ್‌) ಟೂರ್ನಿಯಲ್ಲಿ ಕಣಕ್ಕೆ ಇಳಿಯದ್ದಾರೆ.

ಆಗಸ್ಟ್‌ 28ರಿಂದ ಸೆಪ್ಟೆಂಬರ್ 19ರ ವರೆಗೆ ಸೇಂಟ್ ಕಿಟ್ಸ್‌ ಮತ್ತು ನೆವಿಸ್‌ನಲ್ಲಿ ಪಂದ್ಯಗಳು ನಡೆಯಲಿವೆ. ಸೇಂಟ್ ಕಿಟ್ಸ್‌ ಆ್ಯಂಡ್ ನೆವಿಸ್‌ ಪ್ಯಾಟ್ರಿಯಾಟ್ಸ್‌ ತಂಡದಲ್ಲಿ ಗೇಲ್‌ ಆಡಲಿದ್ದಾರೆ. ಈ ತಂಡವನ್ನು ಅವರು 2017 ಮತ್ತು 2018ರಲ್ಲಿ ಪ್ರತಿನಿಧಿಸಿದ್ದರು. 2017ರಲ್ಲಿ ಗೇಲ್‌ ಆಟದ ಬಲದಿಂದ ತಂಡ ಫೈನಲ್ ಪ್ರವೇಶಿಸಿತ್ತು.

ವಿಶ್ವದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಶಕೀಬ್ ಅವರು ಜಮೈಕಾ ತಲ್ಲವಾಸ್‌ಗೆ ವಾಪಸಾಗಿದ್ದಾರೆ. 2016 ಮತ್ತು 2017ರಲ್ಲಿ ಅವರು ಈ ತಂಡದಲ್ಲಿ ಆಡಿದ್ದರು. 2019ರಲ್ಲಿ ಬಾರ್ಬಡೀಸ್ ಟ್ರೈಡೆಂಟ್ಸ್‌ಗೆ ಸೇರಿದ್ದರು. ಆ ವರ್ಷ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು.

ADVERTISEMENT

ಸೇಂಟ್ ಲೂಸಿಯಾ ಜಾಕ್ಸ್‌ ಪರವಾಗಿ ಫಫ್ ಡು ಪ್ಲೆಸಿ ಕಣಕ್ಕೆ ಇಳಿಯಲಿದ್ದಾರೆ. ಮುಂದೂಡಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೆಸಿ ಅಮೋಘ ಸಾಮರ್ಥ್ಯ ತೋರಿದ್ದಾರೆ. ಅಜೇಯ 95 ರನ್ ಸೇರಿದಂತೆ ಸತತ ನಾಲ್ಕು ಅರ್ಧಶತಕ ಸಿಡಿಸಿದ್ದಾರೆ. 2016ರಲ್ಲಿ ಅವರುಪ್ಯಾಟ್ರಿಯಾಟ್ಸ್‌ ಪರ ಆಡಿದ್ದರು.

ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶವಿದೆ. ಆದರೆ 50 ಶೇಕಡಾ ಟಿಕೆಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ‍ತಂಡಗಳ ಪೋಷಕರಿಗೆ ಕೋವಿಡ್ ಲಸಿಕೆ ಕಡ್ಡಾಯ ಮಾಡಲಾಗಿದೆ ಎಂದು ಸೇಂಟ್ ಕಿಟ್ಸ್‌ ಮತ್ತು ನೆವಿಸ್ ಸರ್ಕಾರ ತಿಳಿಸಿದೆ.

ಕಳೆದ ಬಾರಿಯ ಟೂರ್ನಿಯಲ್ಲಿ ಟ್ರಿನ್‌ಬಾಗೊ ನೈಟ್‌ ರೈಡರ್ಸ್‌ ತಂಡ ಪ್ರಶಸ್ತಿ ಗಳಿಸಿತ್ತು. ಫೈನಲ್‌ನಲ್ಲಿ ಸೇಂಟ್ ಲೂಸಿಯಾ ಜಾಕ್ಸ್‌ ವಿರುದ್ಧ ಈ ತಂಡ ಜಯ ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.