ADVERTISEMENT

ಸಹಾಯಹಸ್ತ | ಭಾರತೀಯ ವಿದ್ಯಾರ್ಥಿಗಳಿಗೆ ವಾರ್ನರ್, ಗಿಲ್‌ಕ್ರಿಸ್ಟ್‌ ಕೃತಜ್ಞತೆ

ಆಸ್ಟ್ರೇಲಿಯಾದಲ್ಲಿ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸಹಾಯಹಸ್ತ

ಪಿಟಿಐ
Published 13 ಜೂನ್ 2020, 11:29 IST
Last Updated 13 ಜೂನ್ 2020, 11:29 IST
ಆ್ಯಡಂ ಗಿಲ್‌ಕ್ರಿಸ್ಟ್‌– ಪಿಟಿಐ ಚಿತ್ರ
ಆ್ಯಡಂ ಗಿಲ್‌ಕ್ರಿಸ್ಟ್‌– ಪಿಟಿಐ ಚಿತ್ರ   

ಮೆಲ್ಬರ್ನ್‌‌: ಆಸ್ಟ್ರೇಲಿಯಾದಲ್ಲಿ ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಇಬ್ಬರು ಭಾರತೀಯ ವಿದ್ಯಾರ್ಥಿಗಳಿಗೆ ಆ ದೇಶದ ಹಿರಿಯ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್‌ ಹಾಗೂ ಡೇವಿಡ್‌ ವಾರ್ನರ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ವೊಲಂಗಾಂಗ್‌ ವಿಶ್ವವಿದ್ಯಾಲಯದಲ್ಲಿ ನರ್ಸಿಂಗ್‌ ಪದವಿ ಅಧ್ಯಯನ ಮಾಡುತ್ತಿರುವ ಭಾರತದ ಶೆರೋನ್‌ ವರ್ಗೀಸ್ ಅವರು, ಸಹ ಆರೋಗ್ಯ ಕಾರ್ಯಕರ್ತರೊಂದಿಗೆ ವೃದ್ಧಾಶ್ರಮಗಳಲ್ಲಿ ಸೇವಾ ನಿರತರಾಗಿದ್ದರು.

‘ವಯಸ್ಸಾದವರ ಸೇವೆಗೆ ಸಮಯ ಮುಡಿಪಾಗಿಟ್ಟ ವಿದ್ಯಾರ್ಥಿನಿ ಶೆರೋನ್‌ ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆಗಳು. ಆಸ್ಟ್ರೇಲಿಯಾದ ಜನರಿಗೆ ಧನ್ಯವಾದ ಹೇಳಲು ಬಯಸಿದ್ದಕ್ಕಾಗಿ ನಿಮಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ನೀವು ಇಲ್ಲಿ ಮೂರುವರೆ ವರ್ಷಗಳ ಕಾಲ ಖುಷಿಯಿಂದ ಕಳೆದಿದ್ದೀರಿ’ ಎಂದು ಗಿಲ್‌ಕ್ರಿಸ್ಟ್‌ ಅವರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ADVERTISEMENT

‘ನಿಮ್ಮ ಈ ಕಾರ್ಯಕ್ಕೆ ಆಸ್ಟ್ರೇಲಿಯಾ, ಭಾರತ ಅದರಲ್ಲೂ ಪ್ರಮುಖವಾಗಿ ನಿಮ್ಮ ಕುಟುಂಬ ಹೆಮ್ಮೆ ಪಡುತ್ತದೆ’ ಎಂದು ಗಿಲ್‌ಕ್ರಿಸ್ಟ್‌ ಹೇಳಿದ್ದಾರೆ.

ಮತ್ತೊಂದು ವಿಡಿಯೊ ತುಣುಕಿನಲ್ಲಿ ವಾರ್ನರ್‌ ಅವರು ಕ್ವೀನ್ಸ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಭಾರತದ ವಿದ್ಯಾರ್ಥಿ ಶ್ರೇಯಸ್‌ ಸೇಠ್‌ ಅವರನ್ನು ಅಭಿನಂದಿಸಿದ್ದಾರೆ.

‘ನಮಸ್ತೆ, ಕೋವಿಡ್‌–19 ಪಿಡುಗಿನ ಬಿಕ್ಕಟ್ಟಿನಲ್ಲಿ ಜನರ ನಿಸ್ವಾರ್ಥ ಸೇವೆ ಮಾಡುತ್ತಿರುವ ಶ್ರೇಯಸ್‌ ಅವರಿಗೆ ಧನ್ಯವಾದ. ಶ್ರೇಯಸ್‌ ಅವರು ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಜ್ಞಾನ ವಿಷಯದ ಸ್ನಾತಕೋತ್ತರ ವಿದ್ಯಾರ್ಥಿ. ವಿ.ವಿ.ಯ ಕಾರ್ಯಕ್ರಮದ ಭಾಗವಾಗಿ ಅವರು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ’ ಎಂದು ವಾರ್ನರ್‌ ತಿಳಿಸಿದ್ದಾರೆ.

‘ಆಸ್ಟ್ರೇಡ್‌ ಇಂಡಿಯಾ’ ಟ್ವಿಟರ್‌ ಖಾತೆಯ ಮೂಲಕ ಈ ಎರಡೂ ವಿಡಿಯೊಗಳನ್ನು ಪೋಸ್ಟ್‌ ಮಾಡಲಾಗಿದೆ. ಹೋದ ಒಂದು ವಾರದಿಂದ ಸಾವಿರಾರು ಜನರು ಇವುಗಳನ್ನು ವೀಕ್ಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.