ADVERTISEMENT

IPL | ಗಿಲ್, ರಶೀದ್ ಉಳಿಸಿಕೊಳ್ಳಲು ಟೈಟನ್ಸ್‌ ಚಿತ್ತ

ಪಿಟಿಐ
Published 29 ಅಕ್ಟೋಬರ್ 2024, 23:30 IST
Last Updated 29 ಅಕ್ಟೋಬರ್ 2024, 23:30 IST
ಶುಭಮನ್ ಗಿಲ್
ಶುಭಮನ್ ಗಿಲ್   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಗುಜರಾತ್ ಟೈಟನ್ಸ್ ತಂಡವು ನಾಯಕ ಶುಭಮನ್ ಗಿಲ್, ಬ್ಯಾಟರ್ ಸಾಯಿ ಸುದರ್ಶನ್ ಮತ್ತು ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳಲಿದೆ. 

ಮುಂಬರುವ ಮೇಗಾ ಹರಾಜು ಪ್ರಕ್ರಿಯೆ ಹಿನ್ನೆಲೆಯಲ್ಲಿ ಆಟಗಾರರ ಉಳಿಕೆ ಮತ್ತು ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ. ಬಿರುಸಿನ ಬ್ಯಾಟರ್‌ಗಳಾದ ರಾಹುಲ್ ತೆವಾಟಿಯಾ ಮತ್ತು ಶಾರೂಕ್ ಖಾನ್ ಅವರನ್ನೂ ತನ್ನಲ್ಲಿಯೇ ಉಳಿಸಿಕೊಳ್ಳಲು ತಂಡವು ನಿರ್ಧರಿಸಿದೆ ಎನ್ನಲಾಗಿದೆ. 

‘ಶುಭಮನ್, ರಶೀದ್ ಮತ್ತು ಸಾಯಿ ಅವರನ್ನು ಉಳಿಸಿಕೊಳ್ಳಲು ಫ್ರ್ಯಾಂಚೈಸಿ ನಿರ್ಧಸರಿಸಿದೆ’ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

ADVERTISEMENT

2022ರಲ್ಲಿ ಗುಜರಾತ್ ತಂಡವು ಐಪಿಎಲ್ ಪದಾರ್ಪಣೆ ಮಾಡಿತ್ತು. ಆಗ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ನಂತರದ ವರ್ಷ ರನ್ನರ್ಸ್ ಅಪ್ ಆಗಿತ್ತು. ಆದರೆ ಈ ವರ್ಷ ಗಿಲ್ ನಾಯಕತ್ವದಲ್ಲಿ ಗುಜರಾತ್ ತಂಡವು 8ನೇ ಸ್ಥಾನ ಪಡೆದಿತ್ತು. 

ಅಫ್ಗಾನಿಸ್ತಾನದ ರಶೀದ್ ಅವರನ್ನು ಉಳಿಸಿಕೊಳ್ಳುವುದು ನಿರೀಕ್ಷಿತವೇ ಆಗಿತ್ತು. 26 ವರ್ಷದ ರಶೀದ್ ಅವರು 2022ರ ಟೂರ್ನಿಯಲ್ಲಿ 19 ವಿಕೆಟ್‌ ಗಳಿಸಿದ್ದರು. ಆದರೆ ಕಳೆದ ಟೂರ್ನಿಯಲ್ಲಿ 12 ಪಂದ್ಯಗಳನ್ನು ಆಡಿ 10 ವಿಕೆಟ್ ಗಳಿಸಿದ್ದರು. ಅವರು ಫಾರ್ಮ್ ಕಳೆದುಕೊಂಡಿದ್ದರು. ಸಾಯಿ ಸುದರ್ಶನ್ ಅವರು 12 ಪಂದ್ಯಗಳಿಂದ 527 ರನ್ ಸೇರಿಸಿದ್ದರು. ಅವರು ಭಾರತ ತಂಡವನ್ನು ಮೂರು ಏಕದಿನ ಮತ್ತು ಒಂದು ಟಿ20 ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ. ಅನುಭವಿ ಆಟಗಾರ ತೆವಾಟಿಯಾ ಅವರು ಹೋದ ಟೂರ್ನಿಯಲ್ಲಿ 145 ಕ್ಕಿಂತಲೂ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. 

ಉಳಿಕೆ ಮತ್ತು ಬಿಡುಗಡೆಯನ್ನು ಅಂತಿಮವಾಗಿ ಪ್ರಕಟಿಸಲು ತಂಡಗಳಿಗೆ ಇದೇ 31ರವರೆಗೆ ಗಡುವು ನೀಡಲಾಗಿದೆ. ನವೆಂಬರ್ ಕೊನೆಯ ವಾರದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.