ADVERTISEMENT

ರಣಜಿಯಲ್ಲಿ ದಾಖಲೆ ಜೊತೆಯಾಟ; ಸ್ನೇಹಲ್‌, ಕಶ್ಯಪ್‌ ತ್ರಿಶತಕ: ಗೋವಾಕ್ಕೆ ಜಯ

ಪಿಟಿಐ
Published 14 ನವೆಂಬರ್ 2024, 15:35 IST
Last Updated 14 ನವೆಂಬರ್ 2024, 15:35 IST
ಸ್ನೇಹಲ್ ಕೌಥಂಕರ್ –ಎಕ್ಸ್‌ ಚಿತ್ರ
ಸ್ನೇಹಲ್ ಕೌಥಂಕರ್ –ಎಕ್ಸ್‌ ಚಿತ್ರ   

ಪೊರ್ವೊರಿಮ್‌, ಗೋವಾ: ಗೋವಾದ ಸ್ನೇಹಲ್‌ ಕೌಥಂಕರ್‌ (ಔಟಾಗದೇ 314) ಮತ್ತು ಕಶ್ಯಪ್ ಬಾಕ್ (ಔಟಾಗದೇ 300) ಅವರು ಮೂರನೇ ವಿಕೆಟ್‌ಗೆ ಮುರಿಯದೆ 606 ರನ್‌ ಸೇರಿಸಿ ರಣಜಿ ಟ್ರೋಫಿ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯವನ್ನು ಗೋವಾ ತಂಡವು ಇನಿಂಗ್ಸ್‌ ಮತ್ತು  551 ರನ್‌ಗಳಿಂದ ಗೆದ್ದಿದೆ. 

ರಣಜಿ ಟ್ರೋಫಿ ಪ್ಲೇಟ್‌ ಲೀಗ್‌ ಗುಂಪಿನ ಅರುಣಾಚಲ ಪ್ರದೇಶದ ವಿರುದ್ಧ ಪಂದ್ಯದಲ್ಲಿ ಕಶ್ಯಪ್ ಮತ್ತು ಸ್ನೇಹಲ್‌ ಜೋಡಿಯು ದಾಖಲೆ ಬರೆದಿದೆ. ಈ ಮೂಲಕ 2016ರಲ್ಲಿ ದೆಹಲಿ ವಿರುದ್ಧ ಮಹಾರಾಷ್ಟ್ರದ ಎಸ್.ಎಂ.ಗುಗಳೆ ಮತ್ತು ಎ.ಆರ್.ಬಾವ್ನೆ ಅವರು ಮೂರನೇ ವಿಕೆಟ್‌ಗೆ ಜೊತೆಯಾಟದಲ್ಲಿ ನಿರ್ಮಿಸಿದ್ದ (ಮುರಿಯದ 594 ರನ್‌) ದಾಖಲೆಯನ್ನು ಮುರಿದರು. ಇದು ರಣಜಿ ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ನಲ್ಲಿ ಗರಿಷ್ಠ ರನ್‌ ಜೊತೆಯಾಟವಾಗಿದೆ.

ಬಿರುಸಿನ ಆಟವಾಡಿದ ಸ್ನೇಹಲ್‌, 215 ಎಸೆತಗಳನ್ನು ಎದುರಿಸಿ 146.04ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದರು. ಅವರು 45 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸಿಡಿಸಿದರು. ಕಶ್ಯಪ್‌ 269 ಎಸೆತಗಳಲ್ಲಿ 111.52 ಸರಾಸರಿಯಲ್ಲಿ ರನ್‌ ಸೂರೆಗೈದರು. ಅವರು  ಅದರಲ್ಲಿ 39 ಬೌಂಡರಿ ಮತ್ತು ಎರಡು ಸಿಕ್ಸರ್‌ ಒಳಗೊಂಡಿತ್ತು.

ADVERTISEMENT

ರಣಜಿ ಟ್ರೋಫಿ ಟೂರ್ನಿಯಲ್ಲಿ ಇಬ್ಬರು ಬ್ಯಾಟರ್‌ಗಳು ಒಂದೇ ಇನಿಂಗ್ಸ್‌ನಲ್ಲಿ ತ್ರಿಶತಕ ದಾಖಲಿಸಿದ ಎರಡನೇ ನಿದರ್ಶನ ಇದಾಗಿದೆ. 1989ರಲ್ಲಿ ಗೋವಾ ವಿರುದ್ಧ ತಮಿಳುನಾಡಿನ ಡಬ್ಲ್ಯು.ವಿ. ರಾಮನ್ ಮತ್ತು ಅರ್ಜುನ್ ಕೃಪಾಲ್ ಸಿಂಗ್ ಕ್ರಮವಾಗಿ 313 ಮತ್ತು 302 ರನ್ ಗಳಿಸಿದ್ದರು.

ಅರುಣಾಚಲ ಪ್ರ‌ದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 84 ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಗೋವಾ ತಂಡ ಎರಡು ವಿಕೆಟ್‌ಗೆ 727 ರನ್‌ ಗಳಿಸಿ,  643 ರನ್‌ ಇನಿಂಗ್ಸ್‌ ಮುನ್ನಡೆಯೊಂದಿಗೆ ಡಿಕ್ಲೇರ್‌ ಮಾಡಿಕೊಂಡಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಅರುಣಾಚಲ ಪ್ರದೇಶ ತಂಡವು 92 ರನ್‌ಗೆ ಕುಸಿದು ಸೋಲೊಪ್ಪಿಕೊಂಡಿತು.

ಕಶ್ಯಪ್ ಬಾಕ್ಲೆ –ಎಕ್ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.