ADVERTISEMENT

ಬೆಂಗಳೂರು ಮೊದಲ ಟೆಸ್ಟ್‌ಗೆ ಚಿನ್ನದ ಹೊಳಪು

ಗಿರೀಶ ದೊಡ್ಡಮನಿ
Published 21 ನವೆಂಬರ್ 2024, 19:51 IST
Last Updated 21 ನವೆಂಬರ್ 2024, 19:51 IST
<div class="paragraphs"><p>ಮೊದಲ ಟೆಸ್ಟ್ ಪಂದ್ಯ ವೀಕ್ಷಿಸಲು ಕಿಕ್ಕಿರಿದು ಸೇರಿದ್ದ ಜನಸ್ತೋಮ</p></div>

ಮೊದಲ ಟೆಸ್ಟ್ ಪಂದ್ಯ ವೀಕ್ಷಿಸಲು ಕಿಕ್ಕಿರಿದು ಸೇರಿದ್ದ ಜನಸ್ತೋಮ

   

  –ಪ್ರಜಾವಾಣಿ ಸಂಗ್ರಹದಿಂದ 

ವಿವಿಯನ್ ರಿಚರ್ಡ್ಸ್ ಕಾಟ್ ಪ್ರಸನ್ನ ಬೌಲ್ಡ್ ಚಂದ್ರಶೇಖರ್..

ADVERTISEMENT

1974ರ ನವೆಂಬರ್ 22ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಿದ್ದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಈ ವಿಕೆಟ್ ಕಣ್ತುಂಬಿಕೊಂಡವರ ಸಂತಸ ಮುಗಿಲು ಮುಟ್ಟಿತ್ತು. ಅದಾಗಲೇ ವಿಶ್ವವಿಖ್ಯಾತ ಸ್ಪಿನ್ನರ್‌ಗಳಾಗಿ ಗುರುತಿಸಿಕೊಂಡಿದ್ದ ಎರ‍್ರಪಳ್ಳಿ ಪ್ರಸನ್ನ ಮತ್ತು ಬಿ.ಎಸ್‌. ಚಂದ್ರಶೇಖರ್ ಅವರು ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ಕಣ್ಮಣಿಯಾದವರು. ವಿವ್ ರಿಚರ್ಡ್ಸ್‌ ಅವರಿಗೆ ಅದು ಪದಾರ್ಪಣೆಯ ಪಂದ್ಯವಾಗಿತ್ತು. ಈ ನೆನಪಿಗೆ ಈಗ ಚಿನ್ನದ ಹೊಳಪು. 

 ಟೆಲಿವಿಷನ್ ಇಲ್ಲದ ಆ ಕಾಲದಲ್ಲಿ ಭಾರತದಲ್ಲಿ ಕ್ರಿಕೆಟ್‌ ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿತ್ತು. ಆದರೆ ಕ್ಲೈವ್‌ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಎಂದರೆ ಎದುರಾಳಿಗಳ ಮೈನಡುಗುತ್ತಿತ್ತು. ದೈತ್ಯ ಬೌಲರ್‌ಗಳು, ಬೀಸಾಟದ ಬ್ಯಾಟರ್‌ಗಳು ಇದ್ದ ಅಗ್ರಮಾನ್ಯ ತಂಡ ಅದಾಗಿತ್ತು. ಆದರೆ ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಇನ್ನೂ ಹೆಚ್ಚಿರಲಿಲ್ಲ. ಅದರಿಂದಾಗಿ ವಿಂಡೀಸ್ ತಂಡವು ಗೆಲ್ಲುವ ಸಾಧ್ಯತೆಗಳೇ ಹೆಚ್ಚಿದ್ದ ಆ ಪಂದ್ಯದ ಪ್ರಮುಖ ಆಕರ್ಣೆಯೆಂದರೆ ಕನ್ನಡನಾಡಿನ ದಿಗ್ಗಜ ಆಟಗಾರರಾದ.  ಪ್ರಸನ್ನ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್ ಅವರು. ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದ ಭಾರತ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

ಕ್ರಿಕೆಟ್ ಲೋಕದ ‘ಕಿಂಗ್’ ಆಗಿ ಬೆಳೆದ ವಿವಿಯನ್ ರಿಚರ್ಡ್ಸ್‌ ಮತ್ತು ಶ್ರೇಷ್ಠ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾದ ಗಾರ್ಡನ್ ಗ್ರೀನಿಜ್ ಅವರು ಪದಾರ್ಪಣೆ ಮಾಡಿದರು. ಭಾರತ ತಂಡದಲ್ಲಿ ಹೇಮಂತ್ ಕಾನಿಟ್ಕರ್ ಅವರು ತಮ್ಮ ಚೊಚ್ಚಲ ಟೆಸ್ಟ್ ಆಡಿದರು.  22 ರಿಂದ 27ರವರೆಗೆ (ಒಂದು ವಿಶ್ರಾಂತಿ ದಿನ ಸೇರಿ) ನಡೆದ ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರನ್ನು ಮಾತಿಗೆಳೆದರೆ ಅದೊಂದೇ ಪಂದ್ಯದ ಇಂತಹ ಹತ್ತು ಹಲವಾರು ನೆನಪುಗಳು ಸಾಲುಗಟ್ಟುತ್ತವೆ.

ವೇಗದ ಬೌಲರ್ ಇರಲಿಲ್ಲ: ‘ನಾನು ಆಗ ಕರ್ನಾಟಕ ರಣಜಿ ಬಳಗದಲ್ಲಿದ್ದೆ. ಪಂದ್ಯ ನೋಡಲು ಹೋಗಿದ್ದೆ. ಹಬ್ಬದ ವಾತಾವರಣ ಇತ್ತು. ಆಗ ಭಾರತದಲ್ಲಿ ಸ್ಪಿನ್‌ ಬೌಲರ್‌ಗಳದ್ದೇ ಪಾರಮ್ಯವಿದ್ದ ಕಾಲ. ವೇಗದ ಬೌಲಿಂಗ್ ಪರಿಕಲ್ಪನೆ ಇನ್ನೂ ಅಷ್ಟಾಗಿ ಇರಲಿಲ್ಲ. ನಮ್ಮ ಅದೃಷ್ಟಕ್ಕೆ ಚಂದ್ರಶೇಖರ್, ಪ್ರಸನ್ನ ಅವರಂತಹ ಅದ್ಭುತ ಬೌಲರ್‌ಗಳಿದ್ದರು. ಭಾರತ ತಂಡದಲ್ಲಿ ಪರಿಣತ ಮತ್ತು ಪರಿಪೂರ್ಣ ಬ್ಯಾಟರ್‌ಗಳೆಂದರೆ ಗಾವಸ್ಕರ್ ಮತ್ತು ವಿಶಿ (ವಿಶ್ವನಾಥ್) ಅವರಾಗಿದ್ದರು. ಅದರಲ್ಲಿ ವಿಶ್ವನಾಥ್ ಅವರ ಬ್ಯಾಟಿಂಗ್ ಎಂದರೆ ರಸದೌತಣ. ಅ ಪಂದ್ಯದಲ್ಲಿ ವಿಂಡೀಸ್‌ನ ಅಲ್ವಿನ್ ಕಾಳಿಚರಣ್ ಶತಕ ಹೊಡೆದರು. ಅವರು ಮತ್ತು ವಿಶಿ ಅವರಿಬ್ಬರ ಬ್ಯಾಟಿಂಗ್ ಒಂದೇ ತರಹ ಇತ್ತು. ಒಂದೇ ಒಂದು ವ್ಯತ್ಯಾಸವೆಂದರೆ ಕಾಳಿಚರಣ್ ಎಡಗೈ ಬ್ಯಾಟರ್ ಆಗಿದ್ದರು’ ಎಂದು ಮಾಜಿ ಕ್ರಿಕೆಟಿಗ ಸಂಜಯ್ ದೇಸಾಯಿ ನೆನಪಿಸಿಕೊಳ್ಳುತ್ತಾರೆ. 

'ಆ ಪಂದ್ಯದಲ್ಲಿ ಪ್ರಸನ್ನ ಅವರು ರಿಚರ್ಡ್ಸ್ ಕ್ಯಾಚ್ ಪಡೆದ ರೀತಿ ಅಮೋಘವಾಗಿತ್ತು. ಅದೂ ನನ್ನ ಅತ್ಯಂತ ಅಚ್ಚುಮೆಚ್ಚಿನ ಬೌಲರ್ ಚಂದ್ರಾ (ಚಂದ್ರಶೇಖರ್) ಅವರ ಎಸೆತದಲ್ಲಿ. ಆ ದೃಶ್ಯವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಆಗ ಕ್ರೀಡಾಂಗಣದ ಪೆವಿಲಿಯನ್ ಮತ್ತಿತರ ಸೌಲಭ್ಯಗಳು ನಿರ್ಮಾಣವಾಗುತ್ತಿದ್ದವು. ಎಂ. ಚಿನ್ನಸ್ವಾಮಿ ಅವರು ಈ ಕ್ರೀಡಾಂಗಣದ ಅಭಿವೃದ್ಧಿಗೆ ನೀಡಿದ ಕಾಣಿಕೆ ಅಗಾಧವಾದುದು’ ಎಂದು ದೇಸಾಯಿ ಹೇಳುತ್ತಾರೆ.

ಬಾಡಿಗೆ ಕುರ್ಚಿ..ಶಾಮಿಯಾನಾ..: ‘ಕೆಎಸ್‌ಸಿಎ ಮೈದಾನದಲ್ಲಿ ಅವತ್ತು 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು. ಪ್ರೇಕ್ಷಕರಿಗಾಗಿ ಬಾಡಿಗೆ ಕುರ್ಚಿ, ಶಾಮಿಯಾನಗಳನ್ನು ಹಾಕಿ ತಾತ್ಕಾಲಿಕ ಗ್ಯಾಲರಿ ನಿರ್ಮಾಣ ಮಾಡಲಾಗಿತ್ತು. ಅದರಲ್ಲಿಯೇ ಕೆಲವು ಕುರ್ಚಿ
ಗಳನ್ನು ಗಣ್ಯ ಅತಿಥಿಗಳಿಗಾಗಿ ಮೀಸಲಿಡಲಾಗಿತ್ತು. ಪೆವಿಲಿಯನ್ ಇನ್ನೂ ಪೂರ್ಣ ಗೊಂಡಿರಲಿಲ್ಲ. ಡ್ರೆಸಿಂಗ್ ರೂಮ್ ಕೂಡ ಸುಸಜ್ಜಿತವಾಗಿರಲಿಲ್ಲ‘ ಎಂದು ಮಾಜಿ ಕ್ರಿಕೆಟಿಗ ಸುಧಾಕರ್ ರಾವ್ ನೆನಪಿಸಿಕೊಳ್ಳುತ್ತಾರೆ. 

‘ಟೆಸ್ಟ್ ಪಂದ್ಯ ಆಯೋಜಿಸುವುದು ಆಗ ಪ್ರತಿಷ್ಠೆಯ ವಿಷಯವಾಗಿತ್ತು.  ಅದನ್ನು ನೋಡಲು ನಾವು ಉತ್ಸುಕರಾಗಿದ್ದೆವು. ರಾಜ್ಯ ತಂಡದಲ್ಲಿದ್ದ ನಮಗೆಲ್ಲ ಪಾಸ್‌ಗಳನ್ನು ನೀಡಿದ್ದರು. ಪೆವಿಲಿಯನ್ ಪಕ್ಕದಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಭಾರತ ತಂಡದ ಆಟಗಾರರನ್ನು ಹತ್ತಿರದಿಂದ ನೋಡಿದೆವು’ ಎಂದರು. 

ಅಂದು ನಡೆದ ಟೆಸ್ಟ್‌ನಲ್ಲಿ ಭಾರತ ತಂಡವು 267 ರನ್‌ಗಳಿಂದ ಸೋತಿತು. ಆದರೆ ಸೋಲು, ಗೆಲುವಿಗಿಂತ ಬೆಂಗಳೂರಿನ ಟೆಸ್ಟ್ ಪಂದ್ಯವು ಭಾರತದ ಕ್ರಿಕೆಟ್‌ ಶಕ್ತಿ ವೃದ್ಧಿಸಲು ಕಾರಣವಾಯಿತು. ಕೋಲ್ಕತ್ತ, ಚೆನ್ನೈ ಹಾಗೂ ಮುಂಬೈನಲ್ಲಿ ಮಾತ್ರ ಟೆಸ್ಟ್ ಪಂದ್ಯಗಳು ನಡೆಯುತ್ತಿದ್ದವು. ಅವುಗಳ ಸಾಲಿಗೆ ಸೇರಿದ ಬೆಂಗಳೂರಿನ ಕ್ರೀಡಾಂಗಣವೂ ಸೇರಿತು. ಪಂದ್ಯದ ಟಿಕೆಟ್‌ಗಳು ₹ 8ರಿಂದ ₹25ರವರೆಗೂ ನಿಗದಿಯಾಗಿದ್ದವಂತೆ.  

ಕಳೆದ 50 ವರ್ಷಗಳಲ್ಲಿ ಇಲ್ಲಿ 25 ಟೆಸ್ಟ್ ಪಂದ್ಯಗಳು ನಡೆದಿವೆ. ಮಳೆ ಬಂದು ನಿಂತ ಅರ್ಧಗಂಟೆಯಷ್ಟರಲ್ಲಿ ಪಂದ್ಯವನ್ನು ನಡೆಸಲು ಮೈದಾನವನ್ನು ಸಿದ್ಧಗೊಳಿಸುವಂತಹ ಸಬ್‌ ಏರ್ ಸಿಸ್ಟಮ್ ಮತ್ತು ಪರಿಣತ ಸಿಬ್ಬಂದಿ ಇರುವ ದೇಶದ ಏಕೈಕ ಕ್ರೀಡಾಂಗಣ ಇದಾಗಿದೆ. 

ಏಕದಿನ, ಟಿ20 ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಗಳ ಪಂದ್ಯಗಳಗಷ್ಟೇ ಅಲ್ಲ. ಟೆಸ್ಟ್ ಪಂದ್ಯಗಳನ್ನು ನೋಡಲೂ  15 ರಿಂದ 20 ಸಾವಿರ ಜನರು ಸೇರುವ ಕ್ರೀಡಾಂಗಣ
ವೆಂಬ ಹೆಗ್ಗಳಿಕೆ ಇದಕ್ಕಿದೆ. ಇತ್ತೀಚೆಗೆ ಇಲ್ಲಿ ನಡೆದ ಭಾರತ–ನ್ಯೂಜಿಲೆಂಡ್ ಪಂದ್ಯ
ವನ್ನು ವೀಕ್ಷಿಸಲು ಪ್ರತಿದಿನ ಸರಾಸರಿ 15 ಸಾವಿರ ಜನರು ಬಂದಿದ್ದರು.

ಕ್ರೀಡಾಂಗಣದಲ್ಲಿ ದಾಖಲಾದ ಪ್ರಮುಖ ಸಂಗತಿಗಳು

* ಭಾರತ ತಂಡವನ್ನು ಸತತ 30 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಬಿಷನ್ ಸಿಂಗ್ ಬೇಡಿ ಅವರು ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ  (1974–75)ಆಡಲಿಲ್ಲ. ಇಂಗ್ಲೆಂಡ್‌ನಲ್ಲಿ ಅವರು ಟಿ.ವಿ. ವಾಹಿನಿಗೆ ಸಂದರ್ಶನ ನೀಡಿದ್ದಕ್ಕಾಗಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಪಂದ್ಯದಲ್ಲಿ ಆಡದಂತೆ ನಿರ್ಬಂಧಿಸಲಾಗಿತ್ತು. 

* 1979–80ರಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಬಾರಿ ಇಲ್ಲಿ ಟೆಸ್ಟ್ ಆಡಿತು. ಆಸ್ಟ್ರೇಲಿಯಾದ ರಾಡ್ನಿ ಹಾಗ್ 6 ಓವರ್‌ಗಳಲ್ಲಿ 11 ನೋಬಾಲ್ ಹಾಕಿದರು. ಇದರಿಂದಾಗಿ ಹತಾಶರಾದ ಅವರು ಸ್ಟಂಪ್‌ ಕಿತ್ತು ಬೀಸಾಕಿದರು. 

* 1983–84ರಲ್ಲಿ ಇಲ್ಲಿ ಭಾರತ–ಪಾಕ್ ಟೆಸ್ಟ್‌ ನಡೆಯಿತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ  ಮೊದಲ ಸಲ ನೋಬಾಲ್ ಮತ್ತು ವೈಡ್‌ಗಳನ್ನು ಬೌಲರ್‌ಗಳ ಖಾತೆಗೆ ಸೇರ್ಪಡೆ ಮಾಡಲಾಯಿತು. 

* 1986-87ರಲ್ಲಿ ನಡೆದ ಟೆಸ್ಟ್‌ನಲ್ಲಿ ಸುನಿಲ್ ಗಾವಸ್ಕರ್ ಕೊನೆಯ ಸಲ ಪಾಕಿಸ್ತಾನದ ಎದುರು ಆಡಿದರು. ಅದರಲ್ಲಿ ಅವರು ಗಳಿಸಿದ 96 ರನ್‌ಗಳ ಇನಿಂಗ್ಸ್‌ ಇವತ್ತಿಗೂ ಜನಜನಿತ. 

* 1993–94ರಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಪಿಲ್ ದೇವ್ ಅವರು ರಿಚರ್ಡ್ ಹ್ಯಾಡ್ಲಿಯ 431 ವಿಕೆಟ್‌ಗಳ ದಾಖಲೆ ಸಮ ಮಾಡಿದರು.  

* 1997–98ರಲ್ಲಿ ಆಸ್ಟ್ರೇಲಿಯಾ ಎದುರು ಆಡಿದ ಭಾರತ ತಂಡದ ಸಚಿನ್ ತೆಂಡೂಲ್ಕರ್ 11 ಸಾವಿರ ರನ್‌ ಮೈಲಿಗಲ್ಲು ತಲುಪಿದರು. ಅದು ಅವರ 139ನೇ ಪಂದ್ಯವಾಗಿತ್ತು.  

* ಅನಿಲ್ ಕುಂಬ್ಳೆ ಅವರು 2007–08ರಲ್ಲಿ  ತಮ್ಮ ತವರಿನಂಗಳದಲ್ಲಿ ಮೊದಲ ಬಾರಿ ನಾಯಕನಾಗಿ ಆಡಿದರು. ಪಾಕಿಸ್ತಾನ ಎದುರು ನಡೆದ ಪಂದ್ಯದಲ್ಲಿ ಅವರು ಐದು ವಿಕೆಟ್ ಗೊಂಚಲು ಗಳಿಸಿದರು.  

* ಸಚಿನ್ ತೆಂಡೂಲ್ಕರ್ 2010–11ರಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದರು. ಅದು ಅವರ ಟೆಸ್ಟ್ ಕ್ರಿಕೆಟ್ ಜೀವನದ ಕೊನೆಯ ದ್ವಿಶತಕ. ಇದೇ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಪದಾರ್ಪಣೆ ಮಾಡಿದರು. 

* 2015–16ರಲ್ಲಿ ಭಾರತ- ದಕ್ಷಿಣ ಆಫ್ರಿಕಾ ಪಂದ್ಯವು ಮಳೆಗೆ ಕೊಚ್ಚಿಹೋಗಿತ್ತು. 

* 2018ರಲ್ಲಿ ಅಫ್ಗಾನಿಸ್ತಾನ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ತಾಣ ಇದು

* 2019ರಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಣ ಇಲ್ಲಿ ಮೊದಲ ಸಲ ಹಗಲು–ರಾತ್ರಿ ಟೆಸ್ಟ್ ನಡೆಯಿತು. ಪಿಂಕ್ ಬಾಲ್ ಪ್ರಯೋಗವಾಯಿತು.

ಮಾಹಿತಿ: ಚನ್ನಗಿರಿ ಕೇಶವಮೂರ್ತಿ

ಕಾಮೆಂಟ್ರಿಯ ದಿನಗಳು

ನಾನು ಅ ಪಂದ್ಯದಲ್ಲಿ ಆಕಾಶವಾಣಿಯ ಸ್ಕೋರರ್ ಆಗಿದ್ದೆ. ಪಂದ್ಯದ ಮುನ್ನಾ ದಿನಗಳಲ್ಲಿ ಚಿನ್ನಸ್ವಾಮಿಯವರೊಂದಿಗೆ ಕಾರ್ಯನಿರ್ವಹಿಸಿದ ನೆನಪುಗಳು ಹಲವಾರಿವೆ. ಆದರೆ ಸ್ಕೋರರ್ ಆಗಿ ಆ ಪಂದ್ಯವನ್ನು ದಾಖಲಿಸಿದ್ದು ಅವಿಸ್ಮರಣೀಯ. ಆಗ ರೇಡಿಯೊ ಕಾಮೆಂಟ್ರಿ ಪ್ರಮುಖವಾಗಿತ್ತು. ಟಿ.ವಿ. ಇರದ ಕಾಲದಲ್ಲಿ ಎಲ್ಲರಿಗೂ ಕಾಮೆಂಟ್ರಿ ಅಚ್ಚುಮೆಚ್ಚು. ಆದ್ದರಿಂದ ನಿಖರ ಅಂಕಿ ಅಂಶ ನೀಡುವುದು ಅಗತ್ಯವಾಗಿತ್ತು. ವಿವ್ ರಿಚರ್ಡ್ಸ್, ಗ್ರಿನೀಜ್ ಪದಾರ್ಪಣೆ ಸೇರಿದಂತೆ ಹಲವು ವಿಶೇಷಗಳು ನಡೆದ ಪಂದ್ಯ ಅದು.   
ಎಚ್‌.ಆರ್. ಗೋಪಾಲಕೃಷ್ಣ, ಕ್ರಿಕೆಟ್ ಅಂಕಿ ಸಂಖ್ಯೆ ಪರಿಣತರು
ಕರ್ನಾಟಕದ ಕ್ರಿಕೆಟ್‌ಗೆ ಆ ಪಂದ್ಯವು ಅತ್ಯಂತ ಮಹತ್ವದ ಮೈಲಿಗಲ್ಲು. ಸುವರ್ಣಮಹೋತ್ಸವದ ಸಮಾರಂಭಕ್ಕೆ ಈ ಮೊದಲು ಯೋಜಿಸಿದ್ದೆವು. ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿದೆ. ಇದನ್ನು ಅದ್ದೂರಿಯಾಗಿ ಆಯೋಜಿಸುತ್ತೇವೆ.
ರಘುರಾಮ್ ಭಟ್, ಅಧ್ಯಕ್ಷರು, ಕೆಎಸ್‌ಸಿಎ

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್: 95.2 ಓವರ್‌ಗಳಲ್ಲಿ 289 (ಗಾರ್ಡನ್ ಗ್ರಿನಿಜ್ 93, ಅಲ್ವಿನ್ ಕಾಳಿಚರಣ್ 124, ಕ್ಲೈವ್‌ ಲಾಯ್ಡ್ 30, ಬಿ.ಎಸ್. ಚಂದ್ರಶೇಖರ್ 112ಕ್ಕೆ4, ಎಸ್. ವೆಂಕಟರಾಘವನ್ 75ಕ್ಕೆ4) ಭಾರತ: 83.5 ಓವರ್‌ಗಳಲ್ಲಿ 260 (ಹೇಮಂತ್ ಕಾನಿಟ್ಕರ್ 65, ಗುಂಡಪ್ಪ ವಿಶ್ವನಾಥ್ 29, ಮನ್ಸೂರ್ ಅಲಿ ಖಾನ್ ಪಟೌಡಿ 22, ಸೈಯದ್ ಅಬೀದ್ ಅಲಿ ಔಟಾಗದೆ 49, ಎರ್‍ರಪಳ್ಳಿ ಪ್ರಸನ್ನ 23, ಆ್ಯಂಡಿ ರಾಬರ್ಟ್ಸ್ 65ಕ್ಕೆ3, ವ್ಯಾನ್‌ಬರ್ನ್ ಹೋಲ್ಡರ್ 37ಕ್ಕೆ3) ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್: 83 ಓವರ್‌ಗಳಲ್ಲಿ 6ಕ್ಕೆ356 ಡಿಕ್ಲೇರ್ಡ್ (ಗಾರ್ಡನ್ ಗ್ರಿನಿಜ್ 107, ಅಲ್ವಿನ್ ಕಾಳಿಚರಣ್ 29, ಕ್ಲೈವ್ ಲಾಯ್ಡ್‌ 163, ಬಿ.ಎಸ್. ಚಂದ್ರಶೇಖರ್ 102ಕ್ಕೆ2, ಎಸ್. ವೆಂಕಟರಾಘವನ್ 79ಕ್ಕೆ2) ಭಾರತ:42.5 ಓವರ್‌ಗಳಲ್ಲಿ 118 (ಗುಂಡಪ್ಪ ವಿಶ್ವನಾಥ್ 22, ಬ್ರಿಜೇಶ್ ಪಟೇಲ್ 22, ಆ್ಯಂಡಿ ರಾಬರ್ಟ್ಸ್ 24ಕ್ಕೆ3, ವ್ಯಾನ್‌ಬರ್ನ್ ಹೋಲ್ಡರ್ 18ಕ್ಕೆ2, ಕೀತ್ ಬೊಯ್ಸ್ 43ಕ್ಕೆ3)

ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 267 ರನ್‌ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.