ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆ. 23ರಿಂದ ಆರಂಭವಾಗಲಿರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯುಪಿಎಲ್) ಆಡಲಿರುವ ಗುಜರಾತ್ ಜೈಂಟ್ಸ್ ತಂಡದ ಪೋಷಾಕನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.
ಸಂಪ್ರಸಿದ್ಧಿ ಸ್ಪೋರ್ಟ್ಸ್ ಎಸ್ಟಾಡಿಯೊದ ಕ್ರಿಕೆಟ್ ಮೈದಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗುಜರಾತ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಮೈಕೆಲ್ ಕ್ಲಿಂಗರ್ ಮತ್ತು ಮೆಂಟರ್ ಮಿಥಾಲಿ ರಾಜ್ ಅವರು ಪೋಷಾಕು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಮೈಕೆಲ್ ಕ್ಲಿಂಗರ್, ‘ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ತಂಡದಲ್ಲಿದ್ದಾರೆ. ನಿತ್ಯ ಅಭ್ಯಾಸದಲ್ಲಿ ತೊಡಗಿದ್ದು, ಈ ಬಾರಿ ಲೀಗ್‌ನಲ್ಲಿ ಉತ್ತಮವಾಗಿ ಆಡುತ್ತಾರೆಂಬ ವಿಶ್ವಾಸ ಇದೆ. ಪ್ರತಿ ಆವೃತ್ತಿಯಲ್ಲೂ ತಂಡದ ಗೆಲುವಿನ ಕುರಿತು ಕಾರ್ಯತಂತ್ರ ರೂಪಿಸಲಾಗುವುದು. ಆಟಗಾರರ ಜತೆ ಚರ್ಚಿಸಿ ಅದನ್ನು ಕಾರ್ಯರೂಪಕ್ಕೆ ತರಲಾಗುವುದು’ ಎಂದು ಹೇಳಿದರು.
ಲೀಗ್‌ನ ಪಂದ್ಯಗಳು ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆಯಲಿವೆ. ಎರಡನೇ ಆವೃತ್ತಿಯ ಡಬ್ಲ್ಯುಪಿಎಲ್‌ನಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರುವರಿ 23 ರಂದು ನಡೆಯಲಿರುವ ಡಬ್ಲ್ಯುಪಿಎಲ್ ಎರಡನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.