ಲಂಡನ್: ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಇಂಗ್ಲಿಷ್ ಟ್ವೆಂಟಿ–20 ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ವೋರ್ಸ್ಟ್‌ಶೈರ್ ಪರವಾಗಿ 35 ಎಸೆತಗಳಲ್ಲಿ ಶತಕ ಗಳಿಸಿದರು. ಚುಟುಕು ಕ್ರಿಕೆಟ್ ಮಾದರಿಯಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಶುಕ್ರವಾರ ತಡರಾತ್ರಿ ನಡೆದ ಗಪ್ಟಿಲ್ (102; 38ಎ, 12ಬೌಂಡರಿ, 7 ಸಿಕ್ಸರ್) ಆಟದ ಬಲದಿಂದ ವೋರ್ಸ್ಟ್‌ಶೈರ್ ತಂಡವು 9 ವಿಕೆಟ್‌ಗಳಿಂದ ನಾರ್ಥಾಂಪ್ಟನ್‌ಶೈರ್ ತಂಡದ ಎದುರು ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನಾರ್ಥಾಂಪ್ಟನ್ ಶೈರ್ ತಂಡವು 20 ಓವರ್‌ಗಳಲ್ಲಿ 188 ರನ್ ಗಳಿಸಿತು. ಗುರಿ ಬೆನ್ನತ್ತಿದ ವೋರ್ಸ್‌ಶೈರ್ ತಂಡವು 13.1 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮೊದಲ ವಿಕೆಟ್‌ಗೆ ಗಪ್ಟಿಲ್ ಹಾಗೂ ಜೋ ಕ್ಲಾರ್ಕ್ ಅವರು 162 ರನ್ ಸೇರಿಸಿದರು. ನಂತರ ರಿಚರ್ಡ್ ಗೀಸನ್ ಅವರ ಬೌಲಿಂಗ್‌್ನಲ್ಲಿ ಕ್ಲಾರ್ಕ್ ಔಟಾದರು. ಕ್ಲಾರ್ಕ್ 33 ಎಸೆತಗಳಲ್ಲಿ 61 ರನ್ ಗಳಿಸಿದರು.
ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಹೆಗ್ಗಳಿಕೆ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಅವರ ಹೆಸರಲ್ಲಿದೆ. 2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪುಣೆ ವಾರಿಯರ್ಸ್ ವಿರುದ್ದದ ಪಂದ್ಯದಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ 30 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ವೇಗದ ಶತಕ ಗಳಿಸಿದವರ ಪಟ್ಟಿಯ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿ ಕ್ರಮವಾಗಿ ಭಾರತದ ರಿಷಭ್ ಪಂತ್ ಹಾಗೂ ಆಸ್ಟ್ರೇಲಿಯಾದ ಆ್ಯಂಡ್ರೂ ಸೈಮಂಡ್ಸ್ ಅವರಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಮೀಬಿಯಾದ ಲೂಯಿಸ್ ವ್ಯಾನ್ ಡೆರ್ ವೆಸ್ತುಜೆನ್, ದಕ್ಷಿಣ ಆಫ್ರಿಕಾದ ಡೆವಿಡ್ ಮಿಲ್ಲರ್, ಭಾರತದ ರೋಹಿತ್ ಶರ್ಮಾ ಅವರು 35 ಎಸೆತಗಳಲ್ಲಿ ಶತಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಗಪ್ಟಿಲ್ ಅವರು ಈ ಸ್ಥಾನಕ್ಕೆ ಹೊಸ ಸೇರ್ಪಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.