ನವದೆಹಲಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಅಮೋಘ ಬ್ಯಾಟಿಂಗ್ ನೆರವಿನಿಂದ ಸೋಲಿನ ಸುಳಿಯಿಂದ ಪಾರಾಗಿದ್ದ ಟೀಮ್ ಇಂಡಿಯಾ ಸ್ಮರಣೀಯ ಡ್ರಾ ಫಲಿತಾಂಶ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.
ವಿಹಾರಿ ಹಾಗೂ ಅಶ್ವಿನ್ ಸಾಧನೆಗೆ ಕ್ರಿಕೆಟ್ ಲೋಕದಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದ್ದರೆ ಅತ್ತ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಮಾತ್ರ ಕ್ರಿಕೆಟನ್ನೇ ಕೊಲೆ ಮಾಡಿದ್ದರು ಎಂದು ಆರೋಪಿಸಿದ್ದರು.
ಇದಕ್ಕೀಗ ಕೇವಲ ಎರಡು ಪದಗಳಲ್ಲೇ ಹನುಮ ವಿಹಾರಿ ಉತ್ತರಿಸುವ ಮೂಲಕ ಬಿಜೆಪಿ ಸಂಸದನ ಬಾಯಿಗೆ ಬೀಗ ಜಡಿದಿದ್ದಾರೆ.
ನೀವು ಸೂಕ್ಷ್ಮವಾಗಿ ಗಮನಿಸಿದಾಗ ಬಾಬುಲ್ ಸುಪ್ರಿಯೊ ತಮ್ಮ ಟ್ವೀಟ್‌ನಲ್ಲಿ ಹನುಮ ವಿಹಾರಿ ಹೆಸರನ್ನು ತಪ್ಪಾಗಿ ಬರೆದಿರುವುದು ಕಂಡುಬರುತ್ತದೆ. 'ಹನುಮ ವಿಹಾರಿ' ಬದಲು 'ಹನುಮ ಬಿಹಾರಿ' ಎಂದು ಉಲ್ಲೇಖ ಮಾಡಿದ್ದರು. ಈಗ ತಮ್ಮ ಹೆಸರನ್ನೇ ಸರಿಯಾಗಿ ಉಲ್ಲೇಖಿಸುವ ಮೂಲಕ ಉತ್ತರ ನೀಡಿರುವ ಹನುಮ ವಿಹಾರಿ ನೆಟ್ಟಿಗರ ಮನ ಗೆದ್ದಿದ್ದಾರೆ.
ಮೈದಾನದಲ್ಲಿ ವಿಹಾರಿಗೆ ತಕ್ಕ ಸಾಥ್ ನೀಡಿರುವ ರವಿಚಂದ್ರನ್ ಅಶ್ವಿನ್, ಸಹ ಇದನ್ನು ಟ್ವೀಟ್ ಮಾಡಿದ್ದು, ತಮಗೆ ನಗು ತಡೆಯಲಾಗುತ್ತಿಲ್ಲ ಎಂದು ಬಿಜೆಪಿ ಸಂಸದರನ್ನು ಹೀಯಾಳಿಸಿದ್ದಾರೆ.
ಹನುಮ ವಿಹಾರಿ ಕುರಿತು ಟ್ವೀಟ್ ಮಾಡಿದ್ದ ಸಂಸದ ಬಾಬುಲ್ ಸುಪ್ರಿಯೊ, ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಅವಕಾಶವಿದ್ದರೂ ಅದನ್ನು ಮಾಡದೆ ಹನುಮ ವಿಹಾರಿ ಕ್ರಿಕೆಟ್‌ನ ಕೊಲೆ ಮಾಡಿದ್ದರು ಎಂದು ಆರೋಪಿಸಿದ್ದರು.
ಹನುಮ ವಿಹಾರಿ ನೀಡಿರುವ ಉತ್ತರ ಅಭಿಮಾನಿಗಳಿಂದಲೂ ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೆ ಕೆಲವೇ ತಾಸಿನಲ್ಲಿ 12,400ಕ್ಕೂ ಹೆಚ್ಚು ರಿಟ್ವೀಟ್‌ಗಳು ಮತ್ತು 56,400ಕ್ಕೂ ಹೆಚ್ಚು ಮೆಚ್ಚುಗೆ ಲಭಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.