ಮುಂಬೈ (ಪಿಟಿಐ): ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸಹೋದರರಿಗೆ ಪಾಲಿಮರ್‌ನ ಪಾಲುದಾರಿಕೆ ಉದ್ಯಮದಲ್ಲಿ ₹ 4 ಕೋಟಿ ವಂಚಿಸಿದ ಆರೋಪದ ಮೇಲೆ, ಇವರ ಮಲ ಸಹೋದರನಾದ ವೈಭವ್ ಪಾಂಡ್ಯನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ನಂಬಿಕೆ ದ್ರೋಹ, ಬೆದರಿಕೆ, ಪಿತೂರಿ, ಪೋರ್ಜರಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಇನ್ನಿತರೆ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರ ಆರ್ಥಿಕ ಅಪರಾಧ ವಿಭಾಗವು (ಇಒಡಬ್ಲ್ಯು), ವೈಭವ್ ಪಾಂಡ್ಯ(37) ಅವರನ್ನು ಸೋಮವಾರ ಬಂಧಿಸಿದೆ ಎಂದು ಅವರು ಹೇಳಿದ್ದಾರೆ.
‘ಕ್ರಿಕೆಟಿಗರಾದ ಸಹೋದರರಿಬ್ಬರು ಮುಂಬೈನಲ್ಲಿ ತಮ್ಮ ಮಲ ಸಹೋದರನೊಂದಿಗೆ 2021ರಲ್ಲಿ ಪಾಲುದಾರಿಕೆ ಆಧಾರಿತ ಪಾಲಿಮರ್ ಉದ್ಯಮವನ್ನು ಆರಂಭಿಸಿದರು. ಸಹೋದರರಿಬ್ಬರು ತಲಾ ಶೇ 40ರಷ್ಟು ಬಂಡವಾಳ ಹೂಡಿದರೆ, ವೈಭವ್ ಶೇ 20ರಷ್ಟು ಬಂಡವಾಳ ಹೂಡಿಕೆ ಮಾಡಿದ್ದ. ಈ ಉದ್ಯಮದ ದೈನಂದಿನ ವಹಿವಾಟಿನ ಜವಾಬ್ದಾರಿಯನ್ನು ಆತನೇ ಹೊತ್ತುಕೊಂಡಿದ್ದ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ತನ್ನ ಮಲ ಸಹೋದರರಿಗೆ ಯಾವೊಂದು ವಿಷಯ ತಿಳಿಸದ ವೈಭವ್, ಇದೇ ವ್ಯವಹಾರದಲ್ಲಿ ಮತ್ತೊಂದು ಕಂಪನಿ ಸ್ಥಾಪಿಸುವ ಮೂಲಕ ಪಾಲುದಾರಿಕೆ ಒಪ್ಪಂದವನ್ನು ಉಲ್ಲಂಘಿಸಿದ್ದಾನೆ. ಹೊಸ ಕಂಪನಿಯಿಂದಾಗಿ ಮೂಲ ಕಂಪನಿಯ ಲಾಭ ಕಡಿಮೆಯಾಗುವುದರ ಜೊತೆಗೆ ಅಂದಾಜು ₹ 3 ಕೋಟಿ ನಷ್ಟವುಂಟಾಗಿದೆ. ಈ ಅವಧಿಯಲ್ಲಿ ಈತನ ವೈಯಕ್ತಿಕ ಲಾಭ ಶೇ 20ರಿಂದ ಶೇ 33ರಷ್ಟು ಹೆಚ್ಚಿದೆ. ₹ 1 ಕೋಟಿ ಹಣವನ್ನು ಪಾಲುದಾರಿಕೆಯ ಖಾತೆಯಿಂದ ಸ್ವಂತಕ್ಕೆ ಬಳಸಿಕೊಂಡಿದ್ದಾನೆ. ನಷ್ಟಕ್ಕೀಡಾದ ಕ್ರಿಕೆಟಿಗರು ನೇರವಾಗಿ ಭೇಟಿಯಾದಾಗ, ನಿಮ್ಮ ಖ್ಯಾತಿಗೆ ಕಳಂಕ ತರುವೆ ಎಂದು ಬೆದರಿಕೆ ಹಾಕಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.
‘ವೈಭವ್ ವಿರುದ್ಧ ಕ್ರಿಕೆಟಿಗರ ಅಕೌಂಟೆಂಟ್ ಖಾರ್ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ. ಇದು ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾವಣೆಗೊಂಡಿದೆ. ಪ್ರಕರಣದಲ್ಲಿ ಈತ ಭಾಗಿಯಾಗಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದಂತೆ ಇಒಡಬ್ಲ್ಯು ವಿಭಾಗದ ಸಿಬ್ಬಂದಿ ಅಂದೇ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಶುಕ್ರವಾರದವರೆಗೂ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.