ADVERTISEMENT

ಐಸಿಸಿ ಟಿ20 ಕ್ರಮಾಂಕಪಟ್ಟಿ: 12ನೇ ಸ್ಥಾನಕ್ಕೇರಿದ ಹರ್ಮನ್‌ಪ್ರೀತ್ ಕೌರ್

ಪಿಟಿಐ
Published 8 ಅಕ್ಟೋಬರ್ 2024, 13:42 IST
Last Updated 8 ಅಕ್ಟೋಬರ್ 2024, 13:42 IST
ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್   

ದುಬೈ: ಭಾರತ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಮಂಗಳವಾರ ಪ್ರಕಟವಾದ ಐಸಿಸಿ ಮಹಿಳಾ ಟಿ20 ರ್‍ಯಾಂಕಿಂಗ್‌ ಪಟ್ಟಿಯ ಬ್ಯಾಟರ್‌ಗಳ ವಿಭಾಗದಲ್ಲಿ ನಾಲ್ಕು ಸ್ಥಾನ ಬಡ್ತಿ ಕಂಡು 12ನೇ ಸ್ಥಾನಕ್ಕೇರಿದ್ದಾರೆ.

ಹರ್ಮನ್‌ಪ್ರೀತ್ ಜೊತೆ ಶ್ರೀಲಂಕಾದ ಹರ್ಷಿತಾ ಸಮರವಿಕ್ರಮ (610 ಪಾಯಿಂಟ್ಸ್‌) ಅವರು 12ನೇ ಸ್ಥಾನ ಹಂಚಿಕೊಂಡಿದ್ದಾರೆ.

ಅನುಭವಿ ಆಟಗಾರ್ತಿ ಸ್ಮೃತಿ ಮಂದಾನಾ ಒಂದು ಸ್ಥಾನ ಕೆಳಗಿಳಿದು ಐದನೇ ಸ್ಥಾನದಲ್ಲಿದ್ದಾರೆ. ಜೆಮಿಮಾ ರಾಡ್ರಿಗಸ್‌ ಕೂಡ ಹಿಂಬಡ್ತಿ ಪಡೆದು 20ನೇ ಸ್ಥಾನಕ್ಕಿಳಿದಿದ್ದಾರೆ. ಬೆತ್‌ ಮೂನಿ (761) ಅಗ್ರಸ್ಥಾನದಲ್ಲಿದ್ದಾರೆ.

ADVERTISEMENT

ಬೌಲರ್‌ಗಳ ಪಟ್ಟಿಯಲ್ಲಿ ಕನ್ನಡತಿ, ಆಫ್ ಸ್ಪಿನ್ನರ್‌ ಶ್ರೇಯಾಂಕ ಪಾಟೀಲ ಅವರು 9 ಸ್ಥಾನ ಮೇಲೇರಿ 29ನೇ ಸ್ಥಾನದಲ್ಲಿದ್ದಾರೆ.

ಅನುಭವಿ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ನಾಲ್ಕನೇ ಸ್ಥಾನಕ್ಕೆ ಸರಿದಿದ್ದಾರೆ. ವೇಗದ ಬೌಲರ್ ರೇಣುಕಾ ಸಿಂಗ್‌ ಠಾಕೂರ್‌ ಐದನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಸಾದಿಯಾ ಇಕ್ಬಾಲ್ ಅಲ್ಪ‍ಕಾಲ ಅಗ್ರಸ್ಥಾನಕ್ಕೇರಿದ್ದು, ಈ ಗೌರವಕ್ಕೆ ಪಾತ್ರರಾದ ಮೊದಲ ಪಾಕ್ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಅವರು ದೀರ್ಘಕಾಲ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಅವರನ್ನು ಹಿಂದೆಹಾಕಿದ್ದರು. ಟಿ20 ವಿಶ್ವಕಪ್ ‘ಎ’ ಗುಂಪಿನಲ್ಲಿ ಲಂಕಾ ವಿರುದ್ಧ 17 ರನ್ನಿಗೆ 3 ವಿಕೆಟ್ ಪಡೆದು ಅಗ್ರಸ್ಥಾನಕ್ಕೇರಿದ್ದ ಅವರು, ಬಾಂಗ್ಲಾ ವಿರುದ್ಧ ವಿಕೆಟ್‌ ಪಡೆಯಲು ವಿಫಲರಾದರು. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧ 15 ರನ್ನಗೆ 2 ವಿಕೆಟ್ ಪಡೆದ ಎಕ್ಲೆಸ್ಟೋನ್ ಪಂದ್ಯದ ಆಟಗಾರ್ತಿ ಗೌರವದ ಜೊತೆಗೆ ಅಗ್ರ ಕ್ರಮಾಂಕ (762 ಪಾಯಿಂಟ್‌) ಮರಳಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.