ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಮಹಿಳೆಯರ ಏಕದಿನ ರ‍್ಯಾಂಕಿಂಗ್ ಪ್ರಕಟಿಸಿದ್ದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಜಂಟಿಯಾಗಿ ಒಂಭತ್ತನೆ ಸ್ಥಾನಕ್ಕೇರಿದ್ದಾರೆ.ತಂಡದ ಮತ್ತೋರ್ವ ತಾರಾ ಬ್ಯಾಟರ್ ಸ್ಮೃತಿ ಮಂದಾನ ನಾಲ್ಕನೆ ಸ್ಥಾನದಲ್ಲೇ ಉಳಿದಿದ್ದಾರೆ. ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಭಾರತ 25 ಅಂಕಗಳೊಂದಿಗೆ ಮೂರನೆ ಸ್ಥಾನ ಪಡೆದಿದೆ.
ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೂರನೆ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದರ ಹಿಂದೆ ನಾಯಕಿ ಹರ್ಮನ್‌ಪ್ರೀತ್ ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ ಮೊದಲೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ರ‍್ಯಾಂಕಿಂಗ್‌ನಲ್ಲಿ ಮೂರು ಸ್ಥಾನಗಳನ್ನ ಕಳೆದುಕೊಳ್ಳಬೇಕಾಯಿತು.
ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕಿ 63 ಎಸೆತಗಳಲ್ಲಿ ಅಜೇಯ 59 ರನ್ ಹೊಡೆದು ಅಗ್ರ 10 ರ‍್ಯಾಂಕಿಂಗ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಕಿವೀಸ್ ಸರಣಿಯಲ್ಲಿ ಶತಕ ಬಾರಿಸಿದ ಸ್ಮೃತಿ ಮಂದಾನ 23 ಅಂಕ ಪಡೆದು ಒಟ್ಟು 728 ಅಂಕ ಸಂಪಾದಿಸಿದರು. ಲಂಕಾದ ಚಾಮರಿ ಅಟಪಟ್ಟು ಅವರಿಗಿಂತ ಐದು ಅಂಕ ಕಡಿಮೆ ಪಡೆದರು. ಇಂಗ್ಲೆಂಡ್ ತಂಡದ ನತಾಲಿ ಶೀವರ್ 760 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.
ಭಾರತದ ವಿಕೆಟ್ ಕೀಪರ್ ಯಸ್ತಿಕಾ ಭಟಿಯಾ 35 ರನ್ ಹೊಡೆದು 48ನೇ ಸ್ಥಾನದಿಂದ 45ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಬ್ರೂಕ್ ಹ್ಯಾಲಿಡೇ 86 ರನ್ ಹೊಡೆದು 24ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ ಅಗತ್ಯ ರೇಟಿಂಗ್ ಅಂಕಗಳನ್ನು ಪಡೆದಿದ್ದಾರೆ.
ಇಂಗ್ಲೆಂಡ್ ತಂಡದ ಎಡಗೈ ಸ್ಪಿನ್ನರ್ ಸೋಫಿ ಎಕ್ಲಾಸ್ಟೋನ್ 770 ಅಂಕ ಪಡೆದು ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಭಾರತದ ವೇಗಿ ರೇಣುಕಾ ಸಿಂಗ್ ನಾಲ್ಕು ಸ್ಥಾನ ಏರಿಕೆ ಕಂಡು 32ನೇ ಸ್ಥಾನ ಪಡೆದಿದ್ದಾರೆ. ತಂಡದ ಮತ್ತೋರ್ವ ಬೌಲರ್ ಸೈಮಾ ಠಾಕೋರ್ 77ನೇ ಸ್ಥಾನ ಮತ್ತು ಪ್ರಿಯಾ ಮಿಶ್ರ 83ನೇ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.