ಮುಂಬೈ: ಜೀವನದಲ್ಲಿ ತಾವು ಎದುರಿಸಿದ್ದ ಅತ್ಯಂತ ಕಠಿಣ ದಿನಗಳನ್ನು ನೆನಪಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್, ಅಮೆರಿಕದಲ್ಲಿ ಪಾಕಿಸ್ತಾನ ಮೂಲದ ಪರ್ಫ್ಯೂಮ್ (ಸುಗಂಧದ್ರವ್ಯ) ಅಂಗಡಿಯಲ್ಲಿ ದಿನಕ್ಕೆ 12ರಿಂದ 13 ತಾಸು ಕೆಲಸ ಮಾಡಿದ್ದೆ ಎಂದು ಹೇಳಿದ್ದಾರೆ.
ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾದ ಬಳಿಕ ಹರ್ಷಲ್ ಅವರ ಕುಟುಂಬವು ಅಮೆರಿಕಕ್ಕೆ ತೆರಳಿತ್ತು. ಆಗ ಹರ್ಷಲ್‌ಗೆ 17 ವರ್ಷ ವಯಸ್ಸಾಗಿತ್ತು.
'ನಾವು ಮೊದಲ ಬಾರಿಗೆ ಅಮೆರಿಕಕ್ಕೆ ಹೋದಾಗ ಜೀವನೋಪಾಯಕ್ಕಾಗಿ ಕೆಲಸವನ್ನು ಹುಡುಕಬೇಕಿತ್ತು. ನ್ಯೂಜೆರ್ಸಿಯ ಎಲಿಜಬೆತ್‌ನಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಯ ಸುಗಂಧದ್ರವ್ಯ ಅಂಗಡಿಯಲ್ಲಿ ಕೆಲಸ ಮಾಡಿದ್ದೆ' ಎಂದು ಹೇಳಿದ್ದಾರೆ.
'ನನಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಬರುತ್ತಿರಲಿಲ್ಲ. ನಾನು ಗುಜರಾತಿ ಮಾಧ್ಯಮದಲ್ಲಿ ಓದಿದ್ದೇನೆ. ಹಾಗಾಗಿ ಅಲ್ಲಿನ ಭಾಷೆ ಮಾತನಾಡುವುದು ಸವಾಲಿನ ವಿಷಯವಾಗಿತ್ತು' ಎಂದು ತಿಳಿಸಿದ್ದಾರೆ.
'ಇದು ಅತ್ಯುತ್ತಮ ಅನುಭವವಾಗಿತ್ತು. ಏಕೆಂದರೆ ನಿಜವಾಗಿಯೂ ಕಾರ್ಮಿಕರ ಕೆಲಸ ಏನೆಂಬುದನ್ನು ಕಲಿತಿದ್ದೇನೆ. ನನ್ನ ಚಿಕ್ಕಪ್ಪ-ಚಿಕ್ಕಮ್ಮ ಕಚೇರಿಗೆ ಹೋಗುತ್ತಿದ್ದರು. ದಾರಿ ಮಧ್ಯೆ ನನ್ನನ್ನು ಬಿಡುತ್ತಿದ್ದರು. ಅವರು ನನ್ನನ್ನು ಬೆಳಿಗ್ಗೆ 7 ಗಂಟೆಗೆ ಡ್ರಾಪ್ ಮಾಡುತ್ತಿದ್ದರು. ಅಂಗಡಿಯು 9 ಗಂಟೆಗೆ ತೆರೆಯುತ್ತಿತ್ತು. ಈ ಎರಡು ಗಂಟೆಗಳ ಕಾಲ ನಾನು ಎಲಿಜಬೆತ್ ನಿಲ್ದಾಣದಲ್ಲಿ ಕುಳಿತುಕೊಳ್ಳುತ್ತಿದ್ದೆ. ರಾತ್ರಿ 8ರವರೆಗೆ ಕೆಲಸವನ್ನು ಮಾಡುತ್ತಿದ್ದೆ. ಪ್ರತಿದಿನ 12-13 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಇದಕ್ಕಾಗಿ 35 ಅಮೆರಿಕನ್ ಡಾಲರ್ ಸಂಬಳ ಸಿಗುತ್ತಿತ್ತು' ಎಂದು ಅಮೆರಿಕದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.