ADVERTISEMENT

ದಕ್ಷಿಣ ಆಫ್ರಿಕಾದ ಬ್ಯಾಟರ್‌ ಹಾಶಿಮ್‌ ಆಮ್ಲಾ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 13:56 IST
Last Updated 19 ಜನವರಿ 2023, 13:56 IST
ಹಾಶಿಮ್‌ ಆಮ್ಲಾ
ಹಾಶಿಮ್‌ ಆಮ್ಲಾ   

ಸರೆ, ಇಂಗ್ಲೆಂಡ್‌ (ಪಿಟಿಐ): ದಕ್ಷಿಣ ಆಫ್ರಿಕಾದ ಬ್ಯಾಟರ್‌ ಹಾಶಿಮ್‌ ಆಮ್ಲಾ ಅವರು ಕ್ರಿಕೆಟ್‌ನ ಎಲ್ಲ ಮಾದರಿಗೆ ನಿವೃತ್ತಿ ಪ್ರಕಟಿಸಿದ್ದಾರೆ. ಇದರೊಂದಿಗೆ ಎರಡು ದಶಕಗಳ ಸುದೀರ್ಘ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆಬಿದ್ದಿದೆ.

39 ವರ್ಷದ ಹಾಶಿಮ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ 2019 ರಲ್ಲೇ ನಿವೃತ್ತಿಯಾಗಿದ್ದರು. ಆ ಬಳಿಕ ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ನಲ್ಲಿ ಸರೆ ತಂಡದ ಪರ ಆಡುತ್ತಿದ್ದರು. ಅವರು ನಿವೃತ್ತಿಯಾಗಿರುವ ವಿಷಯವನ್ನು ಸರೆ ತಂಡ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ.

2013 ಮತ್ತು 2014 ರಲ್ಲಿ ಸರೆ ತಂಡವನ್ನು ಪ್ರತಿನಿಧಿಸಿದ್ದ ಅವರು, 2019 ರಲ್ಲಿ ಮತ್ತೆ ಆ ತಂಡದ ಜತೆ ಒಪ್ಪಂದ ಮಾಡಿಕೊಂಡಿದ್ದರು. ಕಳೆದ ವರ್ಷ ಸರೆ ತಂಡ ಕೌಂಟಿ ಚಾಂಪಿಯನ್‌ಷಿಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

2004 ರಿಂದ 2019ರ ಅವಧಿಯಲ್ಲಿ ಅವರು ದಕ್ಷಿಣ ಆಫ್ರಿಕಾ ತಂಡದ ಪರ 124 ಟೆಸ್ಟ್‌, 181 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿದ್ದರು. ಮೂರೂ ಮಾದರಿಗಳಲ್ಲಿ ಒಟ್ಟು 18,672 ರನ್‌ಗಳನ್ನು ಕಲೆಹಾಕಿದ್ದರು.

ಟೆಸ್ಟ್‌ನಲ್ಲಿ ತ್ರಿಶತಕ ದಾಖಲಿಸಿದ ದಕ್ಷಿಣ ಆಫ್ರಿಕಾದ ಏಕೈಕ ಬ್ಯಾಟರ್‌ ಎಂಬ ಹೆಗ್ಗಳಿಕೆ ಅವರದ್ದು. 2012 ರಲ್ಲಿ ಇಂಗ್ಲೆಂಡ್‌ ವಿರುದ್ಧ ಗಳಿಸಿದ್ದ 311 ರನ್‌ಗಳು ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ ಒಬ್ಬ ಗಳಿಸಿದ ಅತಿದೊಡ್ಡ ಮೊತ್ತ ಎಂಬ ದಾಖಲೆಯಾಗಿ ಉಳಿದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.