ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳೂ 'ಹೋಮ್ ಅ್ಯಂಡ್ ಅವೇ' ಮಾದರಿಯಲ್ಲಿ ನಡೆದರೆ ಫ್ರ್ಯಾಂಚೈಸಿಗಳಿಗೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಮಿಥಾಲಿ ರಾಜ್ ಹೇಳಿದರು.
ಹೋದ ವರ್ಷ ನಡೆದ ಡಬ್ಲ್ಯುಪಿಎಲ್ ಮೊದಲ ಆವೃತ್ತಿಯ ಎಲ್ಲ ಪಂದ್ಯಗಳೂ ಮುಂಬೈನಲ್ಲಿ ಆಗಿದ್ದವು. ಈ ಬಾರಿ ಬೆಂಗಳೂರು ಮತ್ತು ದೆಹಲಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ತಂಡವು ಭಾನುವಾರ ಮೊದಲ ಪಂದ್ಯ ಆಡಲಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದೊಮ್ಮೆ ಬೇರೆ ಬೇರೆ ನಗರಗಳಲ್ಲಿ ಡಬ್ಲ್ಯುಪಿಎಲ್ ಪಂದ್ಯಗಳೂ ನಡೆದರೆ ಜನಪ್ರಿಯತೆ ಹೆಚ್ಚುವುದು. ಅಭಿಮಾನಿಗಳ ಹೊಸ ಬಳಗಗಳು ಸೇರ್ಪಡೆಯಾಗುವರು. ಇದರಿಂದಾಗಿ ಟೂರ್ನಿ ಮತ್ತು ಫ್ರ್ಯಾಂಚೈಸಿಗಳ ಮೌಲ್ಯವೂ ಹೆಚ್ಚಲಿದೆ’ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ತಂಡದ ನಾಯಕಿ ಬೆತ್ ಮೂನಿ, ‘ಆಟಗಾರ್ತಿಯರು ತುಂಬು ಉತ್ಸಾಹದಲ್ಲಿದ್ದಾರೆ. ಮೊದಲ ಪಂದ್ಯದಿಂದ ಗೆಲುವಿನ ಆರಂಭ ಮಾಡುವ ಛಲದಲ್ಲಿದ್ದಾರೆ. ತಂಡದಲ್ಲಿ ಪರಸ್ಪರ ಹೊಂದಾಣಿಕೆ ಉತ್ತಮವಾಗಿದೆ’ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ಫ್ರ್ಯಾಂಚೈಸಿಯ ಮುಖ್ಯ ವಾಣಿಜ್ಯ ಅಧಿಕಾರಿ (ಸಿಬಿಒ) ಸಂಜಯ್ ಆದೇಸರ್, ‘ಈ ಬಾರಿ ನಮ್ಮ ತಂಡದಲ್ಲಿ ಉತ್ತಮ ಆಟಗಾರ್ತಿಯರು ಇದ್ದಾರೆ. ಯಾವುದೇ ತಂಡಕ್ಕೂ ಕಠಿಣ ಪೈಪೋಟಿಯೊಡ್ಡುವ ಶಕ್ತಿ ಇದೆ. ಆಟಗಾರ್ತಿಯರ ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್ ಅಮೋಘವಾಗಿದೆ’ ಎಂದರು.
‘ಈ ಬಾರಿ ಎರಡು ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ವಿಸ್ತರಣೆ ಕುರಿತು ಬಿಸಿಸಿಐ ಯೋಚಿಸಬಹುದು. ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಡಬ್ಲ್ಯುಪಿಎಲ್ ಉತ್ತಮ ಕಾಣಿಕೆ ನೀಡುತ್ತಿದೆ’ ಎಂದರು.
ಫೆಬ್ರುವರಿ 25ರ ಪಂದ್ಯ: ಗುಜರಾತ್ ಜೈಂಟ್ಸ್–ಮುಂಬೈ ಇಂಡಿಯನ್ಸ್
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.