ADVERTISEMENT

ಕೊಹ್ಲಿ ಬಗ್ಗೆ ಪುಸ್ತಕ ಬರೆಯಬಲ್ಲೆ, ಅವರನ್ನು ಬೆಂಬಲಿಸಿದವರಿಗೆ ಧನ್ಯವಾದ: ಡಿ.ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2024, 10:50 IST
Last Updated 29 ಮೇ 2024, 10:50 IST
<div class="paragraphs"><p>ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್</p></div>

ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್

   

ಪಿಟಿಐ ಚಿತ್ರಗಳು

ನವದೆಹಲಿ: ಸ್ಟ್ರೈಕ್‌ರೇಟ್‌ ವಿಚಾರವಾಗಿ ಟೀಕೆಗಳು ಎದುರಾದಾಗ ವಿರಾಟ್‌ ಕೊಹ್ಲಿಯನ್ನು ಬೆಂಬಲಿಸಿದವರಿಗೆ ಧನ್ಯವಾದಗಳು ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.

ADVERTISEMENT

ಆರ್‌ಸಿಬಿಯ ಮಾಜಿ ನಾಯಕ ಕೊಹ್ಲಿ ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ ಬಗ್ಗೆ 2024ರ ಐಪಿಎಲ್‌ ಟೂರ್ನಿ ಆರಂಭದಲ್ಲಿ ಟೀಕೆಗಳು ಕೇಳಿಬಂದಿದ್ದವು. ಭಾರತದ ಬ್ಯಾಟಿಂಗ್‌ ದಂತಕತೆ ಸುನಿಲ್‌ ಗವಾಸ್ಕರ್‌ ಸೇರಿದಂತೆ ಖ್ಯಾತನಾಮರೇ ಕಿಡಿಕಾರಿದ್ದರು. ಆದರೆ, ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸೈಮನ್‌ ಡಲ್‌ ಅವರು ಟೀಕೆಗಳನ್ನು ಉಪೇಕ್ಷಿಸುವಂತೆ ಕೊಹ್ಲಿಗೆ ಸಲಹೆ ನೀಡಿದ್ದರು.

ಈ ಕುರಿತು 'ಕ್ರಿಕ್‌ಬಜ್‌' ತಾಣದೊಂದಿಗೆ ಮಾತನಾಡಿರುವ ಕಾರ್ತಿಕ್‌, 'ಈ ವರ್ಷ ಕೊಹ್ಲಿ ಹೇಗಿದ್ದರು ಎಂಬ ಬಗ್ಗೆ ಪುಸ್ತಕ ಬರೆಯಬಲ್ಲೆ. ಸೈಮನ್‌ ಡಲ್‌ ಹಾಗೂ ಅವರಂತಹ ಇನ್ನೂ ಕೆಲವರಿಗೆ ಧನ್ಯವಾದಗಳು. ಅವರು ನಿಜವಾಗಿಯೂ ಕೊಹ್ಲಿಗೆ ಉತ್ತೇಜನ ನೀಡಿದರು. ತಮ್ಮ ವಿರುದ್ಧದ ಟೀಕೆಗಳಿಂದಲೇ ಕೊಹ್ಲಿ ಯಶಸ್ಸು ಸಾಧಿಸಿದರು' ಎಂದು ಕಾರ್ತಿಕ್‌ ಹೇಳಿದ್ದಾರೆ.

'ಜನರ ಅನಿಸಿಕೆಗಳು ತಪ್ಪು ಎಂಬುದನ್ನು ಸಾಬೀತು ಮಾಡಲು ಕೊಹ್ಲಿ ಇಷ್ಟಪಡುತ್ತಾರೆ. ಅದನ್ನು ಅವರು ಹೇಳಿಕೊಳ್ಳದಿದ್ದರೂ, ಅದೇ ಅವರಿಗೆ ಉತ್ತೇಜನ ನೀಡುತ್ತಿರುತ್ತದೆ. ಕೊಹ್ಲಿ ಕರಗಿದ ಲಾವಾ ರಸದಂತೆ ಉರಿಯುತ್ತಿರುತ್ತಾರೆ. ನೀವು ಅವರ ಪಕ್ಕ ನಿಲ್ಲಲು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಕೊಹ್ಲಿಯನ್ನು ವಿರೋಧಿಸಿದವರಿಗೆ ಕುಟುಕಿದ್ದಾರೆ.

ಕೊಹ್ಲಿ ತಮ್ಮ ವಿರುದ್ಧದ ಟೀಕೆಗಳಿಂದ ಹೊರಬಂದು ಈ ಬಾರಿ ಯಶಸ್ಸು ಸಾಧಿಸಿದಂತೆಯೇ, ಮತ್ತೆ ಮತ್ತೆ ಮಾಡುತ್ತಿರುತ್ತಾರೆ ಎಂದೂ ಕಾರ್ತಿಕ್‌ ಹೊಗಳಿದ್ದಾರೆ.

ಕೊಹ್ಲಿಗೆ ಆರೆಂಜ್ ಕ್ಯಾಪ್‌
ಟೂರ್ನಿಯುದ್ದಕ್ಕೂ ಅಮೋಘ ಲಯದಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ, ಈ ಆವೃತ್ತಿಯಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್‌ ಎನಿಸಿದ್ದಾರೆ.

ಆಡಿದ 15 ಇನಿಂಗ್ಸ್‌ಗಳಲ್ಲಿ 154ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು, 1 ಶತಕ ಹಾಗೂ 5 ಅರ್ಧಶತ ಸಹಿತ 741 ರನ್‌ ಕಲೆಹಾಕಿದ್ದಾರೆ.

ಇದರೊಂದಿಗೆ ಅವರು ಐಪಿಎಲ್‌ನಲ್ಲಿ ಎರಡು ಬಾರಿ ಸಲ ಆರೆಂಜ್ ಕ್ಯಾಪ್‌ ಗಳಿಸಿದ ಹಾಗೂ 700ಕ್ಕಿಂತ ಹೆಚ್ಚು ರನ್‌ ಬಾರಿಸಿದ ಭಾರತದ ಏಕೈಕ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗೆ ನೀಡುವ 'ಆರೆಂಜ್ ಕ್ಯಾಪ್‌' ಅನ್ನು ಕೊಹ್ಲಿ 2016ರಲ್ಲಿ ಮೊದಲ ಬಾರಿ ಪಡೆದಿದ್ದರು. ಆ ಟೂರ್ನಿಯಲ್ಲಿ ಅವರು, 973 ರನ್ ಗಳಿಸಿದ್ದರು. ಅದು ಒಂದೇ ಆವೃತ್ತಿಯಲ್ಲಿ ಬ್ಯಾಟರ್‌ವೊಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.