ಬೆಂಗಳೂರು: ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ, ಬ್ಯಾಟರ್ ಮನೀಷ್ ಪಾಂಡೆ ಅವರನ್ನು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮುಂದಿನ ಎರಡು ಪಂದ್ಯಗಳಿಗೆ ಕರ್ನಾಟಕ ತಂಡದಿಂದ ಕೈಬಿಡಲಾಗಿದೆ.
ಕರ್ನಾಟಕ ತಂಡವು ಇದೇ 26ರಿಂದ 29ರವರೆಗೆ ತ್ರಿಪುರ ವಿರುದ್ಧ ಅಗರ್ತಲಾದಲ್ಲಿ ಮತ್ತು ಫೆ.2 ರಿಂದ 5ರವರೆಗೆ ರೈಲ್ವೇಸ್ ವಿರುದ್ಧ ಸೂರತ್‌ನಲ್ಲಿ ಆಡಲಿದೆ. ಈ ಪಂದ್ಯಗಳಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು 16 ಮಂದಿಯ ರಾಜ್ಯ ತಂಡವನ್ನು ಸೋಮವಾರ ಪ್ರಕಟಿಸಿದ್ದು, ಆಲ್‌ರೌಂಡರ್ ಹಾರ್ದಿಕ್ ರಾಜ್, ಬ್ಯಾಟರ್ ಕೆ.ವಿ. ಅನೀಶ್ ಮತ್ತು ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಶುಭಾಂಗ್ ಬದಲು ಹಾರ್ದಿಕ್ ಸ್ಥಾನ ಪಡೆದಿದ್ದಾರೆ. 17 ವರ್ಷದ ಈ ಎಡಗೈ ಆಟಗಾರ, 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಪಿ ಗೆದ್ದ ಕರ್ನಾಟಕದ ತಂಡದ ಪರ ಉತ್ತಮ ಪ್ರದರ್ಶನ ತೋರಿದ್ದರು. ತಮಿಳುನಾಡು ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಶತಕ ಸೇರಿದಂತೆ ಟೂರ್ನಿಯಲ್ಲಿ ಒಟ್ಟು 299 ರನ್ ಗಳಿಸಿದ್ದರು. ಜತೆಗೆ ಎಂಟು ಪಂದ್ಯಗಳಲ್ಲಿ ಎರಡು ಬಾರಿ ಐದು ವಿಕೆಟ್ ಗೊಂಚಲು ಸೇರಿದಂತೆ ಒಟ್ಟು 28 ವಿಕೆಟ್ ಪಡೆದು ಮಿಂಚಿದ್ದರು.
ಶುಭಾಂಗ್ ಅವರು ಈ ಹಿಂದಿನ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಸೋಮವಾರ ಮುಕ್ತಾಯಗೊಂಡ ಗೋವಾ ವಿರುದ್ಧದ ಪಂದ್ಯದಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.
ಗೋವಾ ವಿರುದ್ಧದ ಪಂದ್ಯದ ಮೊದಲ ದಿನ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಕೈಗೆ ಗಾಯಗೊಂಡ ಬ್ಯಾಟರ್ ಮನೀಷ್ ಪಾಂಡೆ ಅವರನ್ನು ಕೈಬಿಟ್ಟು ಅನೀಶ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಅನೀಶ್ ಅವರು ಕರ್ನಲ್ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಪರ ಅಗ್ರ ಕ್ರಮಾಂಕದಲ್ಲಿ ಎರಡು ಶತಕಗಳನ್ನು ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವನ್ನು ಪ್ರತಿನಿಧಿಸಿದ್ದ ಪ್ರಸಿದ್ಧ ಕೃಷ್ಣ ಅವರು, ಗುಜರಾತ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ಹೀಗಾಗಿ, ಅಭಿಲಾಷ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಕರ್ನಾಟಕ ತಂಡ: ಮಯಂಕ್ ಅಗರವಾಲ್ (ನಾಯಕ), ಆರ್. ಸಮರ್ಥ್, ಡಿ.ನಿಶ್ಚಲ್, ದೇವದತ್ತ ಪಡಿಕ್ಕಲ್, ನಿಕಿನ್ ಜೋಸ್ ಎಸ್.ಜೆ (ಉಪನಾಯಕ), ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ವೈಶಾಖ ವಿಜಯಕುಮಾರ್, ವಾಸುಕಿ ಕೌಶಿಕ್, ಕೆ. ಶಶಿಕುಮಾರ್, ಸುಜಯ್ ಸಾತೇರಿ (ವಿಕೆಟ್ ಕೀಪರ್), ಎಂ. ವೆಂಕಟೇಶ್, ಕಿಶನ್ ಎಸ್. ಬೆದರೆ, ಎ.ಸಿ.ರೋಹಿತ್ ಕುಮಾರ್, ಅಭಿಲಾಷ್ ಶೆಟ್ಟಿ, ಕೆ.ವಿ. ಅನೀಶ್, ಹಾರ್ದಿಕ್ ರಾಜ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.