ದುಬೈ: ಗಮನಾರ್ಹ ಬೆಳವಣಿಗೆಯೊಂದರಲ್ಲಿ ಐಪಿಎಲ್ 14ನೇ ಆವೃತ್ತಿಯ ವೇಳಾಪಟ್ಟಿಯಲ್ಲಿ ಬದಲಾವಣೆ ತರಲಾಗಿದ್ದು, ಕೊನೆಯ ಎರಡು ಪಂದ್ಯಗಳನ್ನು ಏಕಕಾಲಕ್ಕೆ ಆಯೋಜಿಸಲು ನಿರ್ಧರಿಸಲಾಗಿದೆ.
ಬಿಸಿಸಿಐ ಈ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಂತೆ ಅಕ್ಟೋಬರ್ 08 ಶುಕ್ರವಾರ ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಸರಿಯಾಗಿ ಎರಡು ಪಂದ್ಯಗಳು ಆಯೋಜನೆಯಾಗಲಿವೆ.
ಐಪಿಎಲ್‌ನಲ್ಲಿ 55 ಹಾಗೂ 56ನೇ ಪಂದ್ಯಗಳನ್ನು ಏಕಕಾಲಕ್ಕೆ ಆಯೋಜಿಸಲು ನಿರ್ಧರಿಸಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ನಿಗದಿಯಂತೆ ದುಬೈಯಲ್ಲಿ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಅದೇ ದಿನ ಸಂಜೆ 3.30ಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಅಬುಧಾಬಿಯಲ್ಲಿ ನಡೆಯಬೇಕಾಗಿದ್ದ ಪಂದ್ಯವನ್ನು ರಾತ್ರಿ 7.30ಕ್ಕೆ ಮುಂದೂಡಲಾಗಿದೆ.
ಹಿಂದಿನ ಸಲದಂತೆ ಈ ಬಾರಿಯೂ ಪ್ಲೇ-ಆಫ್ ಪ್ರವೇಶಕ್ಕಾಗಿ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಹಾಗಾಗಿ ಯಾವುದೇ ತಂಡ ರನ್‌ರೇಟ್ ಲೆಕ್ಕಾಚಾರದಲ್ಲಿ ಪ್ಲೇ-ಆಫ್ ಪ್ರವೇಶಿಸುವ ಪ್ರಯೋಜನ ಪಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂತಹದೊಂದು ಕ್ರಮ ಕೈಗೊಳ್ಳಲಾಗಿದೆ.
ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಎರಡು ಪಂದ್ಯಗಳು ಏಕಕಾಲಕ್ಕೆ ಆಯೋಜನೆಯಾಗಲಿವೆ ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ನಡೆದ ಐಪಿಎಲ್ ಕೋವಿಡ್‌ನಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈಗ ಯುಎಇನಲ್ಲಿ ಟೂರ್ನಿಯ ದ್ವಿತೀಯಾರ್ಧದ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.