ಬೆಂಗಳೂರು: ಗೆಳತಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರತ ಕ್ರಿಕೆಟ್ ತಂಡದ ಆಟಗಾರ ಅಮಿತ್ ಮಿಶ್ರಾ ವಿರುದ್ಧದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಪ್ರಕರಣ ರದ್ದು ಕೋರಿ ಅಮಿತ್ ಮಿಶ್ರಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಪ್ರತಿವಾದಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದ್ದು ವಿಚಾರಣೆಯನ್ನು ಎರಡು ವಾರ ಮುಂದೂಡಲಾಯಿತು.
ಪ್ರಕರಣವೇನು?: ‘ಮಿಶ್ರಾ ಕ್ರಿಕೆಟ್ ತರಬೇತಿ ಶಿಬಿರಕ್ಕೆಂದು 2015ರ ಸೆಪ್ಟಂಬರ್‌ನಲ್ಲಿ ಬೆಂಗಳೂರಿಗೆ ಬಂದಿದ್ದರು. ರಿಚ್ಮಂಡ್ ರಸ್ತೆಯ ರಿಟ್ಜ್ ಕಾರ್ಲ್‌ಟನ್ ಹೋಟೆಲ್‌ನಲ್ಲಿ ತಂಗಿದ್ದರು. ಸೆ.25ರಂದು ವಂದನಾ ಜೈನ್ ಅವರು ಮಿಶ್ರಾ ಅವರನ್ನು ಭೇಟಿ ಮಾಡಲು ಹೋಟೆಲ್‌ಗೆ ತೆರಳಿದ್ದ ವೇಳೆ ಇಬ್ಬರ ನಡುವೆ ಜಗಳ ಉಂಟಾಗಿತ್ತು’ ಎಂಬುದು ದೂರಿನ ಸಾರಾಂಶ.
ವಂದನಾ ಜೈನ್ ಸೆ.27ರಂದು ಅಶೋಕನಗರ ಠಾಣೆಗೆ ದೂರು ನೀಡಿ, ‘ಮಿಶ್ರಾ ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ಆರೋಪಿಸಿದ್ದರು. ನಗರದ 11ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪೊಲೀಸರು ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.