ಲಂಡನ್: ಕ್ರಿಕೆಟ್‌ನಲ್ಲಿ ಇನ್ನು ಮುಂದೆ ನಾನ್‌ಸ್ಟ್ರೈಕರ್ ಬ್ಯಾಟರ್‌ಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ,’ಮಂಕಡಿಂಗ್’ ಮಾಡುವುದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ನಡೆಯಲ್ಲ. ಅದನ್ನು ರನ್‌ಔಟ್ ಎಂದೇ ಪರಿಗಣಿಸಲಾಗುವುದೆಂದು ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬುಧವಾರ ತಿಳಿಸಿದೆ.
ಎಂಸಿಸಿಯು ಕ್ರಿಕೆಟ್ ನಿಯಮಾವಳಿಯಲ್ಲಿ ಮಹತ್ವದ ಪರಿಷ್ಕರಣೆ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಬಹುಚರ್ಚಿತವಾದ ಮಂಕಡಿಂಗ್ ನಿಯಮವೂ ಒಂದು. ಅಲ್ಲದೇ ಬೌಲರ್‌ಗಳು ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಅಥವಾ ಬೆವರು ಲೇಪನ ಮಾಡುವುದನ್ನೂ ಶಾಶ್ವತವಾಗಿ ನಿಷೇಧಿಸಲಾಗಿದೆ.
ಏನಿದು ಮಂಕಡ್ ರನ್‌ಔಟ್?
ಮಂಕಡಿಂಗ್ ಸುದೀರ್ಘ ಕಾಲದಿಂದ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಾನ್‌ಸ್ಟ್ರೈಕರ್ ತುದಿಯಲ್ಲಿರುವ ಬ್ಯಾಟರ್, ಬೌಲರ್ ಎಸೆತ ಹಾಕುವ ಮುನ್ನವೇ ಕ್ರೀಸ್ ಬಿಟ್ಟಿದ್ದರೆ ರನ್‌ಔಟ್ ಮಾಡುವುದನ್ನು ಮಂಕಡಿಂಗ್ ಎನ್ನಲಾಗುತ್ತದೆ. ಇದುವರೆಗೂ ಈ ರೀತಿ 1948ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ ಭಾರತದ ಎಡಗೈ ಸ್ಪಿನ್ನರ್ ವಿನೂ ಮಂಕಡ್ ಅವರು ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಬಿಲ್ಲಿ ಬ್ರೌನ್ ಕ್ರೀಸ್ ಬಿಟ್ಟಿದ್ದರು. ಮಂಕಡ್ ಬೌಲಿಂಗ್ ಆ್ಯಕ್ಷನ್ ಮಾಡದೇ ಬೇಲ್ಸ್ ಎಗರಿಸಿದರು. ಆ ಪ್ರವಾಸದ ಸಂದರ್ಭದಲ್ಲಿ ಮಂಕಡ್ ಅವರು ಬ್ರೌನ್ ಅವರಿಗೆ ಎರಡನೇ ಬಾರಿ ಈ ರೀತಿ ಮಾಡಿದ್ದರು. ಮೊದಲ ಬಾರಿ ಅವರು ಬ್ರೌನ್‌ಗೆ ಎಚ್ಚರಿಕೆ ನೀಡಿದ್ದರು. ಎರಡನೇ ಬಾರಿ ರನ್‌ಔಟ್ ನೀಡಲಾಯಿತು. ಆಗ ಆಸ್ಟ್ರೇಲಿಯಾ ಮಾಧ್ಯಮಗಳು ಮಂಕಡ್ ಅವರನ್ನು ಟೀಕಿಸಿದ್ದವು. ‘ಮಂಕಡಿಂಗ್’ ಎಂದು ಕರೆದಿದ್ದವು ಈ ರೀತಿ ಕರೆಯುವುದು ದಿಗ್ಗಜ ವಿನೂ ಮಂಕಡ್ ಅವರಿಗೆ ಮಾಡುವ ಅವಮಾನ ಎಂದು ಸುನಿಲ್ ಗಾವಸ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.
ಎಂಸಿಸಿ ನಿಯಮ 41.16ರಲ್ಲಿ ನಾನ್ ಸ್ಟ್ರೈಕರ್ ರನ್‌ಔಟ್ ಕುರಿತು ಉಲ್ಲೇಖವಿದೆ. ಈಗ ಇದನ್ನು ನಿಯಮ 41 (ಅನ್‌ಫೇರ್ ಪ್ಲೇ) ನಿಂದ ನಿಯಮ 38 (ರನ್‌ಔಟ್)ಕ್ಕೆ ಬದಲಾವಣೆ ಮಾಡಲಾಗಿದೆ.
2019ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆರ್. ಅಶ್ವಿನ್ ಅವರು, ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿದ್ದರು. ಆಗ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಬಹಳಷ್ಟು ಜನರು ಅಶ್ವಿನ್ ಅವರನ್ನು ಟೀಕಿಸಿದ್ದರು.
ಆದರೆ, ಭಾರತ ಸೇರಿದಂತೆ ಕೆಲವು ದೇಶಗಳ ಕ್ರಿಕೆಟಿಗರು ಅಶ್ವಿನ್ ನಡೆಯನ್ನು ಬೆಂಬಲಿಸಿದ್ದರು. ಅಂದಿನಿಂದಲೂ ಅಶ್ವಿನ್ ಮಂಕಡಿಂಗ್ ನಿಯಮಬಾಹಿರವಲ್ಲ ಎಂದೇ ವಾದಿಸಿದ್ದರು. ಎಂಸಿಸಿ ನಿಯಮ ಬದಲಾಯಿಸಿದ ಬೆನ್ನಲ್ಲೇ ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟಿಗರು ಇದು ಅಶ್ವಿನ್ ಹೋರಾಟಕ್ಕೆ ಸಂದ ಜಯ ಎಂದು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.