ಒಂ ದು ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರವು ಹೆಚ್ಚೆಂದರೆ ಮೂರು ತಾಸುಗಳಲ್ಲಿ ಮುಕ್ತಾಯವಾಗುತ್ತದೆ. ರೋಚಕ ಪತ್ತೆದಾರಿ ಕಾದಂಬರಿಯ ಓದು ಕೂಡ ಕೊನೆಯ ಪುಟಕ್ಕೆ ಮುಗಿಯುತ್ತದೆ. ಕುತೂಹಲಕಾರಿ ಟೆಸ್ಟ್ ಕ್ರಿಕೆಟ್ ಪಂದ್ಯ ಗರಿಷ್ಠ ಎಂದರೆ ಐದನೇ ದಿನ ಮುಗಿಯಲೇಬೇಕಲ್ಲವೇ?
ಆದರೆ...
ಮಹೇಂದ್ರ ಸಿಂಗ್ ಧೋನಿ ವೃತ್ತಿ–ನಿವೃತ್ತಿಯ ಪ್ರಹಸನ ಮಾತ್ರ ಇದೆಲ್ಲವನ್ನೂ ಮೀರಿಸಿದ ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. ಅದರಲ್ಲೂ ಸತತ ಏಳು ತಿಂಗಳಿಂದ ನಿರಂತರವಾಗಿ ಕ್ರಿಕೆಟ್ ವಲಯದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಈ ಅವಧಿಯಲ್ಲಿ ಜಗತ್ತಿನಲ್ಲಿ ಹತ್ತಾರು ಮಹತ್ವದ ಘಟನೆಗಳು ನಡೆದು ತೆರೆಮರೆಗೆ ಸರಿದವು. ಆದರೆ, ಧೋನಿಯ ವಿಷಯಕ್ಕೆ ಒಂದು ತಾರ್ಕಿಕ ಅಂತ್ಯವೇ ಸಿಕ್ಕಿಲ್ಲ. ಬಹುಶಃ ಭಾರತ ಕ್ರಿಕೆಟ್ ಇತಿಹಾಸದಲ್ಲಿ ವಿಕೆಟ್‌ಕೀಪರ್ ಒಬ್ಬರ ಬಗ್ಗೆ ಇಷ್ಟೊಂದು ಚರ್ಚೆಯಾದ ಉದಾಹರಣೆಯೇ ಇಲ್ಲ. ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗಿರುವಷ್ಟು ತಾರಾ ವರ್ಚಸ್ಸು ವಿಕೆಟ್‌ಕೀಪಿಂಗ್‌ಗೆ ಸಿಕ್ಕಿದ್ದೂ ಕಡಿಮೆ. ಆದರೆ, ಧೋನಿ ಕೀಪಿಂಗ್, ನಾಯಕತ್ವ ಮತ್ತು ಬ್ಯಾಟಿಂಗ್‌ನಲ್ಲಿ ಛಾಪು ಮೂಡಿಸಿದರು.
ಆದ್ದರಿಂದಲೇ ಅವರ ನಿವೃತ್ತಿ ಕುರಿತು ಈ ಮಟ್ಟದ ಚರ್ಚೆ ನಡೆಯುತ್ತಿರುವುದು. ಅವರ ಸ್ಥಾನ ತುಂಬಬಲ್ಲ ಸಮರ್ಥರು ಯಾರು ಎಂಬ ಮಾತುಗಳೂ ಈಗ ಮುನ್ನೆಲೆಯಲ್ಲಿವೆ. 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2017ರಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವವನ್ನು ದಿಢೀರನೇ ಬಿಟ್ಟುಕೊಟ್ಟಿದ್ದ ಧೋನಿ ಅಚ್ಚರಿ ಮೂಡಿಸಿದ್ದರು. ಆದರೆ ಇದೀಗ ಸೀಮಿತ ಓವರ್‌ಗಳ ಮಾದರಿಗಳಿಂದ ತಮ್ಮ ವಿದಾಯವನ್ನು ಘೋಷಿಸಲು ಅಥವಾ ಮರಳಿ ಕಣಕ್ಕೆ ಬರುವ ಕುರಿತು ಪ್ರಕಟಿಸಲು ದೀರ್ಘ ಸಮಯ ತೆಗೆದುಕೊಳ್ಳುತ್ತಿರುವುದು ಕೂಡ ಅಷ್ಟೇ ಅಚ್ಚರಿ ಮೂಡಿಸಿದೆ.
ಇದೆಲ್ಲದರ ಹೊರತಾಗಿ ಧೋನಿ ಬರುವ ಮುನ್ನ ಮತ್ತು ಮುಂದೊಂದು ದಿನ ಅವರು ನಿವೃತ್ತರಾದ ನಂತರ ಭಾರತದ ವಿಕೆಟ್‌ಕೀಪಿಂಗ್ ಕ್ಷೇತ್ರ ಹೇಗಿತ್ತು ಮತ್ತು ಹೇಗಿರಲಿದೆ ಎಂಬ ಹಿನ್ನೋಟ–ಮುನ್ನೋಟಗಳ ಅಗತ್ಯವಂತೂ ಇದೆಯಲ್ಲವೇ?
ಮಹಿಗಿಂತ ಮೊದಲು
1932ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆಡಿದ ಮೊಟ್ಟಮೊದಲ ಟೆಸ್ಟ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡಿದವರು ಜನಾರ್ಧನ್ ನವಲೆ. ಆರಂಭಿಕ ಬ್ಯಾಟ್ಸ್‌ಮನ್ ಕೂಡ ಆಗಿದ್ದರು.
ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅವರು ಪುಣೆ ಸಮೀಪದ ಅಕ್ಕಿ ಗಿರಣಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದರು. ಬಡತನದಲ್ಲಿಯೇ ಜೀವನ ಕಳೆದರು. ಆದರೆ ಇವತ್ತು ಧೋನಿ ಅವರ ಆಸ್ತಿಪಾಸ್ತಿ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. . ಫೋಬ್ಸ್ ನಿಯತಕಾಲಿಕೆಯ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಧೋನಿ ಕೂಡ ಒಬ್ಬರು. ನವಲೆ ಮತ್ತು ಧೋನಿಯ ನಡುವಿನ ಅವಧಿಯಲ್ಲಿ ಕೀಪಿಂಗ್ ಅನ್ನು ಉತ್ಕೃಷ್ಠಗೊಳಿಸಿದವರು ಬಹಳಷ್ಟು ಜನ. ಆದರೆ, ನೆನಪಿನಲ್ಲಿ ಉಳಿಯುವಂತವು ಬೆರಳೆಣಿಕೆಯಷ್ಟು ಹೆಸರುಗಳು.
ಫರೂಖ್ ಇಂಜಿನಿಯರ್, ಕರ್ನಾಟಕದ ಬುಧಿ ಕುಂದರನ್, ಸೈಯದ್ ಕಿರ್ಮಾನಿ, ಸದಾನಂದ ವಿಶ್ವನಾಥ್, ಕಿರಣ್ ಮೋರೆ, ಚಂದ್ರಕಾಂತ್ ಪಂಡಿತ್, ನಯನ್ ಮೊಂಗಿಯಾ, ಪಾರ್ಥಿವ್ ಪಟೇಲ್, ದಿನೇಶ್ ಕಾರ್ತಿಕ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರುಗಳು ಕಾಣಸಿಗುತ್ತವೆ. ಇಲ್ಲಿ ದ್ರಾವಿಡ್ ಅವರು ಹೆಚ್ಚು ಕಾಲ ಕೀಪಿಂಗ್ ಮಾಡಿದವರಲ್ಲ. ನಯನ್ ಮೊಂಗಿಯಾ ನಿವೃತ್ತಿ ನಂತರ ಸೌರವ್ ಗಂಗೂಲಿ ಸೂಚನೆ ಮೇರೆಗೆ ಕೀಪಿಂಗ್ ಆರಂಭಿಸಿದವರು. ಅಷ್ಟೊತ್ತಿಗೆ ದ್ರಾವಿಡ್ ಅವರ ಬ್ಯಾಟಿಂಗ್ ಉತ್ತುಂಗದಲ್ಲಿತ್ತು. ಆದರೆ ಜೂನಿಯರ್ ಕ್ರಿಕೆಟ್‌ನಲ್ಲಿ ಮಾಡಿದ್ದ ಕೀಪಿಂಗ್ ಅವರಿಗೆ ಮತ್ತೊಂದು ರೀತಿಯಲ್ಲಿ ವರದಾನವಾಯಿತು.
ಇದೀಗ ಕೆ.ಎಲ್. ರಾಹುಲ್‌ಗೂ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಬ್ಯಾಟಿಂಗ್‌ನೊಂದಿಗೆ ಕೀಪಿಂಗ್ ಕೂಡ ಜೊತೆಯಾಗಿದೆ. ಅವರು ನಾಯಕ ವಿರಾಟ್ ಕೊಹ್ಲಿಯ ಮನಗೆದ್ದಿದ್ದಾರೆ. ಆದರೆ, ಬ್ಯಾಟ್ಸ್‌ಮನ್‌ಗಳನ್ನು ಕೀಪಿಂಗ್‌ಗೆ ತರುವುದಕ್ಕಿಂತ, ಪರಿಣತ ವಿಕೆಟ್‌ಕೀಪರ್‌ಗಳಿಗೇ ಅವಕಾಶ ನೀಡಬೇಕು ಎಂದು ಕೆಲವು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಡುತ್ತಾರೆ.
‘ವಿಕೆಟ್‌ಕೀಪರ್ –ಬ್ಯಾಟ್ಸ್‌ಮನ್ ಎಂದರೆ, ಆಲ್‌ರೌಂಡರ್ ಇದ್ದಂತೆ. ರಾಹುಲ್ ಕೀಪಿಂಗ್ ಮಾಡುವುದರಿಂದ ಇನ್ನೊಬ್ಬ ಬ್ಯಾಟ್ಸ್‌ಮನ್‌ಗೆ ತಂಡದಲ್ಲಿ ಅವಕಾಶ ನೀಡಬಹುದು ಎಂದು ಹೇಳುತ್ತಾರೆ. ಆದರೆ, ರಾಹುಲ್ ಬ್ಯಾಟ್ಸ್‌ಮನ್ ಆಗಿ ಪೂರ್ಣ ಸಮರ್ಪಣೆಯಿಂದ ಆಡಿದರೆ, ಇನ್ನೊಬ್ಬ ವಿಕೆಟ್‌ಕೀಪರ್ ಕೂಡ ಬ್ಯಾಟಿಂಗ್ ಮಾಡಬಲ್ಲ. ಕೀಪಿಂಗ್ ಎಂಬ ಕಲೆ ಉಳಿಯಬೇಕು. ಅದು ಸಾಂದರ್ಭಿಕವಾಗಬಾರದು. ಧೋನಿ ಒಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಅದನ್ನು ಇನ್ನೊಬ್ಬರು ದಾಟುವಂತಾಗಬೇಕು’ ಎಂದು ಹಿರಿಯ ಕ್ರಿಕೆಟಿಗ ಸೈಯದ್ ಕಿರ್ಮಾನಿ ಹೇಳುತ್ತಾರೆ.
ಕೀಪಿಂಗ್ ಭವಿಷ್ಯ
ಕಿರ್ಮಾನಿಯವರ ಮಾತನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ ಭಾರತದ ದೇಶಿಿ ಕ್ರಿಕೆಟ್‌ನಲ್ಲಿ ಇವತ್ತು ವರ್ಷಪೂರ್ತಿ ಟೂರ್ನಿಗಳು ನಡೆಯುತ್ತಿವೆ. ಆದ್ದರಿಂದ ವಿಕೆಟ್‌ಕೀಪಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೊಂದು ಪರಿಣತ ವಿಭಾಗವಾಗಿದ್ದು ಬಹಳಷ್ಟು ಹುಡುಗರ ಭವಿಷ್ಯ ಅಡಗಿದೆ.
ರಿಷಭ್ ಪಂತ್, ಸಂಜು ಸ್ಯಾಮ್ಸನ್, ಆಂಧ್ರದ ಶ್ರೀಕರ್ ಭರತ್, ಬಂಗಾಳದ ವೃದ್ಧಿಮಾನ್ ಸಹಾ ಸೇರಿದಂತೆ ಹಲವು ಹುಡುಗರು ಭಾರತ ತಂಡದ ಬೆಂಚ್‌ನಲ್ಲಿದ್ದಾರೆ. ಇವರೆಲ್ಲರನ್ನು ಬಿಟ್ಟು ಕೆ.ಎಲ್. ರಾಹುಲ್ ಅವರಿಗೆ ಅವಕಾಶ ಕೊಡಲಾಗಿದೆ. ರಾಹುಲ್ ಜೂನಿಯರ್ ಕ್ರಿಕೆಟ್‌ನಲ್ಲಿ ಕೀಪರ್ ಆಗಿದ್ದವರು. ಆದರೆ ಬಹಳ ವರ್ಷಗಳಿಂದ ಕೀಪಿಂಗ್‌ನಿಂದ ದೂರ ಇದ್ದರು.
ಧೋನಿ ಇದ್ದ ಕಾರಣಕ್ಕೆ ಪಾರ್ಥಿವ್ ಪಟೇಲ್, ದಿನೇಶ್ ಕಾರ್ತಿಕ್, ನಮನ್ ಓಜಾ ಸೇರಿದಂತೆ ಹಲವು ವಿಕೆಟ್‌ಕೀಪರ್‌ಗಳು ತಮ್ಮ ರಾಜ್ಯ ತಂಡಗಳಿಗೆ ಮಾತ್ರ ಸೀಮಿತರಾಗಿದ್ದರು. ಸರಿಸುಮಾರು ಒಂದೂವರೆ ದಶಕ ಸ್ಟಂಪ್ ಹಿಂದೆ ಮೆರೆದ ಧೋನಿ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರ ಸ್ಥಾನ ತುಂಬಬಲ್ಲ ಸಮರ್ಥರ ಹುಡುಕಾಟ ನಡೆದಿದೆ.
ಪಂತ್ ಆರಂಭದಲ್ಲಿ ಭರವಸೆ ಮೂಡಿಸಿದ್ದರು. ಆದರೆ, ಬಹಳಷ್ಟು ಅವಕಾಶಗಳನ್ನು ವ್ಯರ್ಥ ಮಾಡಿಕೊಂಡರು. ಅದರಿಂದಾಗಿ ಈಗ ರಾಹುಲ್ ಮುನ್ನೆಲೆಗೆ ಬಂದಿದ್ದಾರೆ.
ಆದರೆ, ಸಂಜು ಸ್ಯಾಮ್ಸನ್, ಭರತ್, ಇಶಾನ್ ಕಿಶನ್ ಅವರಂತಹ ಯುವಕರಿಗೆ ಏಕೆ ಅವಕಾಶ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ಇನ್ನೇನು ಹೊಸ ಆಯ್ಕೆ ಸಮಿತಿಯು ಬಂದರೆ ಕಾಲ ಬದಲಾಗಬಹುದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.