ಬ್ರಿಜ್‌ಟೌನ್, ಬಾರ್ಬಡೋಸ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಮಂಗಳವಾರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಬಿ ಗುಂಪಿನ ಪಂದ್ಯದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಸ್ಕಾಟ್ಲೆಂಡ್ ಎದುರು ಆಡಲಿದೆ. ಈಚೆಗೆ ಮುಗಿದ ಐಪಿಎಲ್ ಟೂರ್ನಿಯಲ್ಲಿ ಫಿಲ್ ಸಾಲ್ಟ್, ಜೋಸ್ ಬಟ್ಲರ್, ಮೋಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಸ್ಯಾಮ್ ಕರನ್ ಆಡಿದ್ದರು.
ಅವರೊಂದಿಗೆ ವೇಗಿ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಇದು ಬೌಲಿಂಗ್ ಬಲವನ್ನು ದ್ವಿಗುಣಗೊಳಿಸಿದೆ. ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡದ ಅನುಭವ ಹಾಗೂ ಸಾಮರ್ಥ್ಯದ ಮುಂದೆ ಸ್ಕಾಟ್ಲೆಂಡ್ ಯಾವ ಆಯಾಮದಿಂದಲೂ ಸಾಟಿಯಾಗುವುದಿಲ್ಲ.
ಆದರೆ ಚುಟುಕು ಮಾದರಿಯಲ್ಲಿ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮೂರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್ ತಂಡವು ಗೆಲುವಿನೊಂದಿಗೆ ಅಭಿಯನ ಆರಂಭಿಸುವ ವಿಶ್ವಾಸದಲ್ಲಿದೆ. ಈ ಗುಂಪಿನಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ, ನಮಿಬಿಯಾ ಹಾಗೂ ಒಮಾನ್ ತಂಡಗಳ ಎದುರು ಪಂದ್ಯಗಳನ್ನು ಆಡಲಿದೆ.
ಸೂಪರ್ 8ರ ಹಂತ ಪ್ರವೇಶಿಸಲು ಗುಂಪು ಹಂತದಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಬೇಕಿದೆ. 2022ರಲ್ಲಿ ಇಂಗ್ಲೆಂಡ್ ಬಳಗವು ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಜಯಿಸಿತ್ತು.
ಆದರೆ ಹೋದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಆಟವು ನಿರಾಶಾದಾಯಕವಾಗಿತ್ತು. ಇದೀಗ ಎಲ್ಲ ಲೋಪಗಳನ್ನು ಮೀರಿ ನಿಂತು ಇಲ್ಲಿ ಜಯದತ್ತ ವಾಲುವತ್ತ ತಂಡವು ಚಿತ್ತ ಹರಿಸಿದೆ.
ಕ್ವಾಲಿಫೈಯರ್ ಹಂತದಲ್ಲಿ ಸ್ಕಾಟ್ಲೆಂಡ್ ತಂಡವು ತನ್ನ ಪಾಲಿನ ಎಲ್ಲ ಆರು ಪಂದ್ಯಗಳಲ್ಲಿಯೂ ಜಯಿಸಿತ್ತು. ಅದರೊಂದಿಗೆ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿತ್ತು.
ರಿಚಿ ಬ್ಯಾರಿಂಗ್ಟನ್ ನಾಯಕತ್ವದ ಸ್ಕಾಟ್ಲೆಂಡ್ ತಂಡದಲ್ಲಿ ಅನುಭವದ ಕೊರತೆ ಇದೆ. ಆದರೆ ಪ್ರತಿಭಾವಂತರಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಕಠಿಣ ಸವಾಲೊಡ್ಡಲು ಸಿದ್ಧರಾಗಿದ್ದಾರೆ.
ಇಂಗ್ಲೆಂಡ್: ಜೋಸ್ ಬಟ್ಟರ್ (ನಾಯಕ) ಮೋಯಿನ್ ಅಲಿ ಜೋಫ್ರಾ ಆರ್ಚರ್ ಜಾನಿ ಬೆಸ್ಟೊ ಹ್ಯಾರಿ ಬ್ರೂಕ್ ಸ್ಯಾಮ್ ಕರನ್ ಬೆನ್ ಡಕೆಟ್ ಟಾಮ್ ಹಾರ್ಟ್ಲಿ ವಿಲ್ ಜ್ಯಾಕ್ಸ್ ಕ್ರಿಸ್ ಜೊರ್ಡಾನ್ ಲಿಯಾಮ್ ಲಿವಿಂಗ್‌ಸ್ಟೋನ್ ಆದಿಲ್ ರಶೀದ್ ಫಿಲ್ ಸಾಲ್ಟ್ ರೀಸ್ ಟಾಪ್ಲಿ ಮಾರ್ಕ್ ವುಡ್.
ಸ್ಕಾಟ್ಲೆಂಡ್: ರಿಚಿ ಬ್ಯಾರಿಂಗ್ಟನ್ (ನಾಯಕ) ಮ್ಯಾಥ್ಯೂ ಕ್ರಾಸ್ ಬ್ರಾಡ್ ಕ್ಯೂರಿ ಕ್ರಿಸ್ ಗ್ರೀವ್ಸ್ ಒಲಿ ಹೇರ್ಸ್ ಜ್ಯಾಕ್ ಜಾರ್ವಿಸ್ ಮಿಚೆಲ್ ಜೋನ್ಸ್ ಮಿಚೆಲ್ ಲೀಸ್ಕ್ ಬ್ರೆಂಡನ್ ಮೆಕ್‌ಮುಲನ್ ಜಾರ್ಜ್ ಮುನ್ಸಿ ಸಫಿಯಾನ್ ಶರೀಫ್ ಕ್ರಿಸ್ ಸೋಲ್ ಚಾರ್ಲೀ ಟೀರ್ ಮಾರ್ಕಸ್ ವ್ಯಾಟ್ ಬ್ರಾಡ್ ವ್ಹೀಟ್. ಪಂದ್ಯ ಆರಂಭ: ರಾತ್ರಿ 8 (ಭಾರತೀಯ ಕಾಲಮಾನ) ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವೆಕ್ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.