ADVERTISEMENT

ಈಗಲಾದರೂ ಪೂಜಾರ, ಪಂತ್, ಅಶ್ವಿನ್ ಮಹತ್ವವನ್ನು ಮನಗಾಣುವಿರಿ: ಸೌರವ್ ಗಂಗೂಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2021, 15:25 IST
Last Updated 11 ಜನವರಿ 2021, 15:25 IST
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ   

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾಗಿ ಬಂದಿರುವ ಟೀಮ್ ಇಂಡಿಯಾ ಸ್ಮರಣೀಯ 'ಡ್ರಾ' ಫಲಿತಾಂಶವನ್ನು ದಾಖಲಿಸಿದೆ.

ಭಾರತ ತಂಡದ ಪ್ರದರ್ಶನವು ಕ್ರಿಕೆಟ್ ಪಂಡಿತರು ಸೇರಿದಂತೆ ಅಭಿಮಾನಿಗಳಿಂದ ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ. ಈ ಮಧ್ಯೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸಹ ಟೀಮ್ ಇಂಡಿಯಾ ಆಟಗಾರರಹೋರಾಟ ಮನೋಭಾವವನ್ನು ಶ್ಲಾಘಿಸಿದ್ದಾರೆ.

ಟೆಸ್ಟ್ ತಂಡದಲ್ಲಿ ಪ್ರಮುಖವಾಗಿಯೂ ನಿಧಾನಗತಿಯ ಬ್ಯಾಟಿಂಗ್ ಮಾಡುವ ಚೇತೇಶ್ವರ ಪೂಜಾರ ಜೊತೆಗೆ ರಿಷಭ್ ಪಂತ್ ಹಾಗೂ ರವಿಚಂದ್ರನ್ ಅಶ್ವಿನ್ ಸಾನಿಧ್ಯವನ್ನು ಪ್ರಶ್ನಿಸಲಾಗಿತ್ತು.

ADVERTISEMENT

ಇದನ್ನೇ ಉಲ್ಲೇಖ ಮಾಡಿರುವ ಸೌರವ್ ಗಂಗೂಲಿ, 'ಈಗಲಾದರೂ ಭಾರತ ತಂಡದಲ್ಲಿ ಪೂಜಾರ, ಪಂತ್ ಹಾಗೂ ಅಶ್ವಿನ್ ಅವರ ಮಹತ್ವವನ್ನು ನಾವೆಲ್ಲರೂ ಮನಗಾಣುತ್ತೇವೆ ಎಂದು ಭಾವಿಸುತ್ತೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗುಣಮಟ್ಟದ ತಂಡದ ವಿರುದ್ದ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಯಾವಾಗಲೂ ಚೆಂಡನ್ನು ದಂಡಿಸುವುದಲ್ಲ. ಸುಮಾರು 400 ಟೆಸ್ಟ್ ವಿಕೆಟ್‌ಗಳು ಹಾಗೆಯೇ ಸಿಗುವುದಿಲ್ಲ. ಅತ್ಯುತ್ತಮವಾಗಿ ಹೋರಾಡಿದ್ದೀರಿ ಟೀಮ್ ಇಂಡಿಯಾ, ಈಗ ಸರಣಿ ಗೆಲ್ಲುವ ಸಮಯ' ಎಂದು ಟ್ವೀಟ್ ಮಾಡಿದ್ದಾರೆ.

ಇಲ್ಲಿ ಗಮನಾರ್ಹ ವಿಷಯವೆಂದರೆ ಇತ್ತೀಚೆಗಷ್ಟೇ ಲಘು ಹೃದಯಾಘಾತಕ್ಕೊಳಗಾಗಿ ಚಿಕಿತ್ಸೆ ಪಡೆದಿರುವಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಚೇತರಿಸಿದ ಬಳಿಕಮಾಡಿದ ಮೊದಲ ಟ್ವೀಟ್ ಇದಾಗಿದೆ.

48 ವರ್ಷದ ಗಂಗೂಲಿ ಅವರಿಗೆ ಜನವರಿ 2 ಶನಿವಾರದಂದು ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತ ಕಾಣಿಸಿಕೂಂಡಿತ್ತು. ಹೃದಯದ ರಕ್ತನಾಳಗಳಲ್ಲಿ ಬ್ಲಾಕ್‌ಗಳು ಕಂಡುಬಂದ ಕಾರಣ ಕೋಲ್ಕತ್ತದ ವುಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಆ್ಯಂಜಿಯೊಪ್ಲಾಸ್ಟಿ ನಡೆಸಿ ಒಂದು ಕಡೆ ಸ್ಟಂಟ್ ಆಳವಡಿಸಲಾಗಿತ್ತು. ಬಳಿಕ ಜನವರಿ 7ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಸೌರವ್ ಗಂಗೂಲಿ, ತಾವು ಪೂರ್ಣವಾಗಿ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.