ಲಾರ್ಡ್ಸ್:ಭಾನುವಾರ ಲಾರ್ಡ್‌ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ರೋಚಕತೆಯಿಂದ ಕೂಡಿತ್ತು.ಸೂಪರ್ ಓವರ್ ಟೈ ಆದರೂ ಇಂಗ್ಲೆಂಡ್ ಟ್ರೋಫಿಗೆ ಮುತ್ತಿಟ್ಟಿದೆ. ಕೊನೇ ಘಟ್ಟದ ಅದೃಷ್ಟದ ಆಟದಲ್ಲಿ ನ್ಯೂಜಿಲೆಂಡ್ ಸೋಲುಂಡಿದೆ. ಟೈ ಆದರೂ, ಇಂಗ್ಲೆಂಡ್ ಪಂದ್ಯ ಗೆದ್ದಿದ್ದು ಹೇಗೆ? ಕಿವೀಸ್ ಪಡೆ ಸೋತಿದ್ದೇಕೆ?
ವಿಶ್ವಕಪ್ ಟೂರ್ನಿಯ ಬೇರೆಲ್ಲ ಪಂದ್ಯಗಳಿಗಿಂತಲೂ ಫೈನಲ್ ಪಂದ್ಯ ಅತ್ಯಂತ ನಾಟಕೀಯವಾಗಿತ್ತು. 50–50 ಓವರ್‌ಗಳಲ್ಲಿ ನ್ಯೂಜಿಲೆಂಡ್ 241(8), ಇಂಗ್ಲೆಂಡ್ 241(ಆಲೌಟ್) ಗಳಿಸಿಕೊಂಡಿದ್ದವು. ಸಮ ಸಮನಾದ ರನ್ ಗಳಿಸಿದ್ದರಿಂದ ಪಂದ್ಯ ಟೈ ಆಗಿ, ಸೂಪರ್ ಓವರ್ ಪ್ರವೇಶಿಸಿತು. ಐಸಿಸಿ ನಿಯಮಾವಳಿಗಳ ಪ್ರಕಾರ ಟೈ ಆದ ಪಂದ್ಯದಲ್ಲಿ ಸೂಪರ್ ಓವರ್ ಮೂಲಕವೇ ವಿಜೇತರನ್ನು ನಿರ್ಣಯಿಸಲಾಗುತ್ತದೆ. ಅದರಂತೆ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ನಡೆಯಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೇ ನಿರ್ದಿಷ್ಟ ಓವರ್‌ನಲ್ಲಿ ಗಳಿಸಿದ್ದು15ರನ್‌ಗಳನ್ನು. ಇದನ್ನು ಬೆನ್ನುಹತ್ತಿದ ನ್ಯೂಜಿಲೆಂಡ್ ಒಂದು ವಿಕೆಟ್ ನಷ್ಟದೊಂದಿಗೆ 15ರನ್ ಗಳಿಸಿತು. ಹೀಗಾಗಿ ಗೆಲುವನ್ನು ಬೌಂಡರಿಗಳ ಆಧಾರದಲ್ಲಿ ನಿರ್ಧರಿಸಲಾಯಿತು.
ಅದರಂತೆ, ಸಿಕ್ಸರ್ ಮತ್ತು ನಾಲ್ಕು ರನ್‌ಸೇರಿದಂತೆ ಬೌಂಡರಿ ಗೆರೆ ದಾಟಿರುವ ಹೊಡೆತಗಳ ಸಂಖ್ಯೆಯನ್ನು ಆಧಾರವಾಗಿಟ್ಟು ಇಂಗ್ಲೆಂಡ್ ಗೆಲುವು ಪಡೆಯಿತು. ಸೂಪರ್ ಮತ್ತು ಇನಿಂಗ್ಸ್‌ನ ನಿಗದಿತ ಓವರ್‌ನಲ್ಲಿ ಗಳಿಸಿರುವ ಬೌಂಡರಿ(ಸಿಕ್ಸರ್ ಮತ್ತು4 ರನ್ ಒಳಗೊಂಡ)ಗಳ ಲೆಕ್ಕಾಚಾರದಂತೆ ಇಂಗ್ಲೆಂಡ್ 26 ಹಾಗೂ ನ್ಯೂಜಿಲೆಂಡ್ 17 ಬೌಂಡರಿಗಳನ್ನು ದಾಖಲಿಸಿದ್ದವು. ಹೆಚ್ಚು ಬೌಂಡರಿ ಹೊಂದಿದ್ದ ಇಂಗ್ಲೆಂಡ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಹೀಗಾಗಿ ವೀರೋಚಿತ ಹೋರಾಟ ನಡೆಸಿಯೂ ನ್ಯೂಜಿಲೆಂಡ್ ಪ್ರಶಸ್ತಿ ವಂಚಿತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.