ADVERTISEMENT

ಕೇಪ್‌ಟೌನ್: ಮಾದಕ ಹಾದಿಯಿಂದ ಕ್ರಿಕೆಟ್‌ ಪಿಚ್‌ನತ್ತ ಮಕ್ಕಳು

ದಕ್ಷಿಣ ಆಫ್ರಿಕಾದ ಕೊಳೆಗೆರಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಸದ್ದಿಲ್ಲದ ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವ ಗ್ಯಾರಿ ಕರ್ಸ್ಟನ್   –ಪಿಟಿಐ ಚಿತ್ರ
ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವ ಗ್ಯಾರಿ ಕರ್ಸ್ಟನ್   –ಪಿಟಿಐ ಚಿತ್ರ   

ಕೇಪ್‌ಟೌನ್: ಇಲ್ಲಿಯ ಖೈಲಿತ್ಷಾ ಟೌನ್‌ಷಿಪ್‌ ಎಂದರೆ ಮಾದಕ ವ್ಯಸನ, ಅಪರಾಧ ಬಡತನಗಳ ಆಗರ. ಜಗತ್ತಿನ ಅತ್ಯಂತ ದೊಡ್ಡ ಕೊಳೆಗೆರಿ ಎಂಬ ಹಣೆಪಟ್ಟಿಯೂ ಇದಕ್ಕಿದೆ.

ಇಲ್ಲಿಯ ಮಕ್ಕಳು ಮತ್ತು ಯುವಕರು ಮಾದಕ ವ್ಯಸನಿಗಳಾಗುವುದನ್ನು ತಡೆಯಲು ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಾರೆ ಮತ್ತು ಅನುಭವಿ ಕೋಚ್ ಗ್ಯಾರಿ ಕರ್ಸ್ಟನ್ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕ್ರಿಕೆಟ್ ಮೂಲಕ ಡ್ರಗ್ಸ್‌ ಪಿಡುಗಿಗೆ ಕಡಿವಾಣ ಹಾಕುವ ಕಾರ್ಯ ಆರಂಭಿಸಿದ್ದಾರೆ. ಮಕ್ಕಳಲ್ಲಿ ಕ್ರಿಕೆಟ್ ಅಭಿರುಚಿ ಬೆಳೆಸಿ ಉತ್ತಮ ಹವ್ಯಾಸ ರೂಪಿಸುತ್ತಿದ್ದಾರೆ.

2011ರಲ್ಲಿ ಭಾರತ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದಾಗ ಗ್ಯಾರಿ ಕೋಚ್ ಆಗಿದ್ದರು. ಅವರು ತಮ್ಮ ದೇಶಕ್ಕೆ ಮರಳಿದ ನಂತರ ಈ ಕಾರ್ಯ ಆರಂಭ ಮಾಡಲು ಯೋಚಿಸಿದ್ದರು.

ADVERTISEMENT

‘ನಾನು ಭಾರತದಿಂದ ಮರಳಿದ ನಂತರ ಕೇಪ್‌ಟೌನ್ ಸುತ್ತಮುತ್ತಲಿನ ಬಡಜನರು ಇರುವ ಪ್ರದೇಶಗಳಲ್ಲಿ ಕ್ರಿಕೆಟ್ ಹೇಗೆ ಇದೆ ಎಂದು ನೋಡಲು ಬಯಸಿದ್ದೆ.  ಆದ್ದರಿಂದ ಪ್ರವಾಸ ಕೈಗೊಂಡು ಸ್ಥಳೀಯ ಶಾಲೆಗಳ ಆಡಳಿತಗಾರರೊಂದಿಗೆ ಮಾತನಾಡಿದ್ದೆ. ಆದರೆ ಅಲ್ಲಿಯ ಪರಿಸ್ಥಿತಿಗಳನ್ನು ನೋಡಿ ಮನಸ್ಸಿಗೆ ಬಹಳ ಬೇಸರವಾಗಿತ್ತು. ಆದ್ದರಿಂದ ಈ ತಾಣದಲ್ಲಿ ಎರಡು ಶಾಲೆಗಳಲ್ಲಿ ಕಾಂಕ್ರಿಟ್ ಪಿಚ್ ಮತ್ತು ನೆಟ್ಸ್‌ ಆರಂಭಿಸಿದೆವು. ನಂತರ ಮತ್ತೆ ಮೂರು ಶಾಲೆಗಳನ್ನು ಸೇರಿಸಿಕೊಳ್ಳಲಾಯಿತು’ ಎಂದು ಗ್ಯಾರಿ ಹೇಳಿದರು.

2014ರಲ್ಲಿ ಗ್ಯಾರಿ ಕರ್ಸ್ಟನ್‌ ಫೌಂಡೇಷನ್ ಇಲ್ಲಿಯ ಮಕ್ಕಳಿಗಾಗಿ ಕ್ರಿಕೆಟ್‌ ಕಲಿಕೆಯ ಯೋಜನೆ ಜಾರಿಗೆ ತಂದಿತು. ಸ್ಥಳೀಯ ಮಕ್ಕಳನ್ನು ಮಾದಕ ವ್ಯಸನ ಮತ್ತು ಅಪರಾಧ ಚಟುವಟಿಕೆಗಳಿಂದ ದೂರವಿರಿಸುವ ಕಾರ್ಯಾರಂಭವಾಯಿತು ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯ ಈಗ ಉತ್ತಮ ಫಲ ನೀಡುವ ಭರವಸೆ ಮೂಡಿಸಿದೆ.

‘ನಾನು ಇಲ್ಲಿ (ಶಿಬಿರ) ಬಂದಾಗಿನಿಂದ ಕೆಟ್ಟ ಚಟಗಳಿಂದ ವಿಮುಖನಾಗಿರುವೆ. ಧೂಮಪಾನ, ಮಾದಕ ವ್ಯಸನಗಳಿಂದ ದೂರವಿರಲು ಸಾಧ್ಯವಾಗಿದೆ. ಇದರಿಂದಾಗಿ ದೈಹಿಕವಾಗಿ ಸುದೃಢವಾಗಿದ್ದೇನೆ. ಭವಿಷ್ಯದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರನಾಗುವ ಭರವಸೆ ನನ್ನಲ್ಲಿದೆ’ ಎಂದು 15 ವರ್ಷದ ಬಾಲಕ ಲುಕೊಲೊ ಮೆಲಾಂಗ್ ವಿಶ್ವಾಸದಿಂದ ನುಡಿಯುತ್ತಾನೆ. ಲುಕೊಲೊ ಸ್ಪಿನ್‌ ಬೌಲಿಂಗ್ ತರಬೇತಿ ಪಡೆಯುತ್ತಿದ್ದು, ಆತನ ಪಾಲಕರು ಮನೆಗೆಲಸದ ಕಾರ್ಮಿಕರಾಗಿದ್ದಾರೆ.

‘ವಿರಾಟ್ ಕೊಹ್ಲಿಯನ್ನು ನನ್ನ ಇಷ್ಟದ ಆಟಗಾರ. ಅವರಂತೆ ಕಠಿಣ ಪರಿಶ್ರಮ, ಛಲ ಬಿಡದೇ ಪ್ರಯತ್ನಿಸುವ ಗುಣ ಮತ್ತು ಕಷ್ಟಗಳನ್ನು ಎದುರಿಸುತ್ತಲೇ ಮುನ್ನುಗ್ಗುವ ಅವರ ಗುಣಗಳನ್ನು ನೋಡಿ ಕಲಿಯುತ್ತಿದ್ದೇನೆ. ಕೇಪ್‌ಟೌನ್‌ನಲ್ಲಿ ಅವರು ಆಡಿದ್ದನ್ನೂ ನೇರವಾಗಿ ನೋಡಿದ್ದೇನೆ. ಮುಂದೊಂದು ದಿನ ನಾನೂ ದೊಡ್ಡ ಸಾಧನೆ ಮಾಡುತ್ತೇನೆ. ಆಗ ಅವರನ್ನು ಭೇಟಿಯಾಗುತ್ತೇನೆ’ ಎಂದು ಲುಕೊಲೊ ವಿಶ್ವಾಸ ವ್ಯಕ್ತಪಡಿಸುತ್ತಾನೆ.

‘ಪ್ರತಿಭೆ ಸಾರ್ವತ್ರಿಕ ಆದರೆ ಅವಕಾಶ ಅಲ್ಲ’ ಎಂದ ಧ್ಯೇಯವಾಕ್ಯದೊಂದಿಗೆ ಗ್ಯಾರಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

ಈ ಪ್ರದೇಶದಲ್ಲಿ ಒಟ್ಟು ಐದು ಶಾಲೆಗಳಲ್ಲಿ ನಡೆಯುತ್ತಿರುವ ಶಿಬಿರಗಳಲ್ಲಿ 5 ರಿಂದ 19 ವರ್ಷದೊಳಗಿನ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಲ್ಲದೇ ಇಲ್ಲಿ  ಉತ್ತಮವಾಗಿ ಆಡುವ ಮಹಿಳಾ ತಂಡವೂ ಸಿದ್ಧವಾಗಿದೆ. ಇಲ್ಲಿಯ ಕೆಲವು ಹುಡುಗಿಯರು ತಮ್ಮ ಪ್ರಾಂತಗಳ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.

‘ಮಕ್ಕಳಿಗೆ ಕ್ರೀಡೆಯಲ್ಲಿ ಅವಕಾಶಗಳು ಸಿಗುವಂತೆ ಮಾಡುವುದೇ ನಮ್ಮ ಉದ್ದೇಶ. ಇಲ್ಲಿ ಕೆಲವು ಉತ್ತಮ ಪ್ರತಿಭಾನ್ವಿತರು ಸಿದ್ಧರಾಗಿದ್ದಾರೆ.  ಆ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಹೊಸ ಪ್ರತಿಭೆಗಳನ್ನು ನೀಡುತ್ತಿರುವ ತೃಪ್ತಿ ನಮ್ಮದು’ ಎಂದು ಗ್ಯಾರಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.