ADVERTISEMENT

ಕೆಪಿಎಲ್: ವಾರಿಯರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್‌ಗೆ ರೋಚಕ ಗೆಲುವು

ಮಹಮ್ಮದ್ ನೂಮಾನ್
Published 26 ಆಗಸ್ಟ್ 2018, 18:22 IST
Last Updated 26 ಆಗಸ್ಟ್ 2018, 18:22 IST
ಭಾನುವಾರ ನಡೆದ ಕೆಪಿಎಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಎದುರಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ತಂಡದ ಮೊಹಮ್ಮದ್ ತಾಹ ಅವರ ಬ್ಯಾಟಿಂಗ್ ಶೈಲಿ –ಪ್ರಜಾವಾಣಿ ಚಿತ್ರ/ ಸವಿತಾ ಬಿ. ಆರ್‌
ಭಾನುವಾರ ನಡೆದ ಕೆಪಿಎಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಎದುರಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ತಂಡದ ಮೊಹಮ್ಮದ್ ತಾಹ ಅವರ ಬ್ಯಾಟಿಂಗ್ ಶೈಲಿ –ಪ್ರಜಾವಾಣಿ ಚಿತ್ರ/ ಸವಿತಾ ಬಿ. ಆರ್‌   

ಮೈಸೂರು: ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯ ದಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡ ಮೈಸೂರು ವಾರಿಯರ್ಸ್ ವಿರುದ್ಧ ಮೂರು ರನ್‌ಗಳ ರೋಚಕ ಜಯ ಸಾಧಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೈಗರ್ಸ್‌ ತಂಡ ಮೊಹಮ್ಮದ್‌ ತಾಹ (68 ರನ್, 47 ಎಸೆತ, 14 ಬೌಂ) ಅವರ ಸೊಗಸಾದ ಆಟದ ನೆರವಿನಿಂದ 6 ವಿಕೆಟ್‌ಗೆ 182 ರನ್ ಗಳಿಸಿತು. ವಾರಿಯರ್ಸ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 179 ರನ್‌ ಪೇರಿಸಿತು.

ಸವಾಲಿನ ಮೊತ್ತ ಬೆನ್ನಟ್ಟಿದ ವಾರಿಯರ್ಸ್‌ಗೆ ಅರ್ಜುನ್‌ ಹೊಯ್ಸಳ (31, 18 ಎಸೆತ) ಮತ್ತು ರಾಜು ಭಟ್ಕಳ (22) ಉತ್ತಮ ಆರಂಭ ನೀಡಿದರು. ಆದರೆ ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳು ಮತ್ತು ಅಮಿತ್‌ ವರ್ಮಾ (24) ವಿಕೆಟ್‌ ಪಡೆದ ಸೂರಜ್‌ ಶೇಷಾದ್ರಿ ಅವರು ವಾರಿಯರ್ಸ್‌ಗೆ ಆಘಾತ ನೀಡಿದರು.

ADVERTISEMENT

ಶೋಯೆಬ್‌ ಹೋರಾಟ: ವಾರಿಯರ್ಸ್‌ ಜಯಕ್ಕೆ ಕೊನೆಯ ಐದು ಓವರ್‌ಗಳಲ್ಲಿ 55 ರನ್‌ಗಳು ಬೇಕಿದ್ದವು.

ಒಂದು ಬದಿಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಶೋಯೆಬ್ ಮ್ಯಾನೇಜರ್ (58 ರನ್, 31 ಎಸೆತ, 4 ಬೌಂ, 4 ಸಿ) ಏಕಾಂಗಿ ಹೋರಾಟ ನಡೆಸಿದರು.

ಕೊನೆಯ ಎರಡು ಓವರ್‌ಗಳಲ್ಲಿ 28 ರನ್‌ಗಳ ಅವಶ್ಯಕತೆಯಿತ್ತು. ದರ್ಶನ್‌ ಬೌಲ್‌ ಮಾಡಿದ 19ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಶೋಯೆಬ್‌ ಸಿಕ್ಸರ್‌ ಸಿಡಿಸಿದರು.

ಆದರೆ ಅದೇ ಓವರ್‌ನಲ್ಲಿ ಅವರು ಔಟಾದರು. ಅಂತಿಮ ಓವರ್‌ನಲ್ಲಿ ಗೆಲುವಿಗೆ ಬೇಕಿದ್ದ 13 ರನ್‌ಗಳಲ್ಲಿ, ವಾರಿಯರ್ಸ್ 9 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಅಬ್ಬರಿಸಿದ ತಾಹ: ಟೈಗರ್ಸ್ ತಂಡದ ಭಾರಿ ಮೊತ್ತಕ್ಕೆ ತಾಹ ಅವರ ಬಿರುಸಿನ ಆಟ ಕಾರಣ. ತಾಹ ಮತ್ತು ಅಭಿಷೇಕ್ ರೆಡ್ಡಿ ಎರಡನೇ ವಿಕೆಟ್‌ಗೆ 46 ಎಸೆತಗಳಲ್ಲಿ 60 ರನ್ ಸೇರಿಸಿ ತಂಡಕ್ಕೆ ನೆರವಾದರು.

ಎದುರಾಳಿ ತಂಡದ ಮಧ್ಯಮವೇಗಿಗಳು ಮತ್ತು ಸ್ಪಿನ್ನರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ ಅವರು ಅಂಗಳದ ಮೂಲೆ ಮೂಲೆಗೂ ಚೆಂಡನ್ನಟ್ಟಿದರು.
ತಾಹ ಔಟಾದ ಬಳಿಕ ಸುಜಿತ್‌ ಎನ್‌.ಗೌಡ (31, 19 ಎಸೆತ, 3 ಬೌಂ, 1 ಸಿ.) ಮತ್ತು ನಾಯಕ ಆರ್.ವಿನಯ್ ಕುಮಾರ್ (ಔಟಾಗದೆ 30, 17 ಎಸೆತ, 3 ಬೌಂ. 1 ಸಿ.) ಅಬ್ಬರಿಸಿದರು. ಕೊನೆಯ ಐದು ಓವರ್‌ಗಳಲ್ಲಿ 64 ರನ್‌ಗಳು ಬಂದವು.

ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 (ಮೊಹಮ್ಮದ್‌ ತಾಹ 68, ಅಭಿಷೇಕ್ ರೆಡ್ಡಿ 12, ಸುಜಿತ್‌ ಎನ್‌.ಗೌಡ 31, ಆರ್.ವಿನಯ್‌ ಕುಮಾರ್ 30, ವೈಶಾಖ್ ವಿಜಯಕುಮಾರ್ 45ಕ್ಕೆ 3, ಎನ್‌.ಪಿ.ಭರತ್ 33ಕ್ಕೆ 2). ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 179 (ಅರ್ಜುನ್ ಹೊಯ್ಸಳ 31, ರಾಜೂ ಭಟ್ಕಳ್ 22, ಅಮಿತ್‌ ವರ್ಮಾ 24, ಶೋಯೆಬ್ ಮ್ಯಾನೇಜರ್ 58, ಸೂರಜ್‌ ಶೇಷಾದ್ರಿ 24ಕ್ಕೆ 3, ಮಹೇಶ್ ಪಾಟೀಲ್ 35ಕ್ಕೆ 2)
**
ತಾಹ, ಅಮಿತ್, ವೈಶಾಖ್‌ ಸಾಧನೆ

ಹುಬ್ಬಳ್ಳಿ ಟೈಗರ್ಸ್ ತಂಡದ ತಾಹ ಮತ್ತು ಮೈಸೂರು ವಾರಿಯರ್ಸ್‌ನ ಅಮಿತ್‌ ವರ್ಮಾ ಅವರು ಕೆಪಿಎಲ್‌ ಟೂರ್ನಿಯಲ್ಲಿ 1000 ರನ್‌ ಪೂರೈಸಿದರು. ಮಯಂಕ್ ಅಗರವಾಲ್ ಮತ್ತು ಆರ್‌.ಜೊನಾಥನ್‌ ಅವರು ಈ ಮೊದಲು ಸಾವಿರ ರನ್‌ ಪೂರೈಸಿದ್ದರು.

ವಾರಿಯರ್ಸ್ ತಂಡದ ವೈಶಾಖ್ ವಿಜಯಕುಮಾರ್ ಅವರು ಕೆಪಿಎಲ್‌ನಲ್ಲಿ 50 ವಿಕೆಟ್‌ ಸಾಧನೆ ಮಾಡಿದ ಎರಡನೇ ಬೌಲರ್‌ ಎನಿಸಿಕೊಂಡರು. ಕೆ.ಗೌತಮ್‌ (52 ವಿಕೆಟ್‌) ಮೊದಲ ಸ್ಥಾನದಲ್ಲಿದ್ದಾರೆ.

**
ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 3 ರನ್‌ ಜಯ;

ಪಂದ್ಯಶ್ರೇಷ್ಠ: ಮೊಹಮ್ಮದ್‌ ತಾಹ
ಸೋಮವಾರ ವಿರಾಮದ ದಿನ

ಮಂಗಳವಾರದ ಪಂದ್ಯ
ಮೈಸೂರು ವಾರಿಯರ್ಸ್–

ಶಿವಮೊಗ್ಗ ಲಯನ್ಸ್
ಆರಂಭ: ಸಂಜೆ 6.40.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.