ADVERTISEMENT

ಹಿಂದಿನ ದಾಖಲೆಗಳಿಂದ ಕೊಹ್ಲಿ ವಿಶ್ವಾಸ ವೃದ್ಧಿ: ಸುನಿಲ್ ಗಾವಸ್ಕರ್

ಪಿಟಿಐ
Published 18 ನವೆಂಬರ್ 2024, 15:50 IST
Last Updated 18 ನವೆಂಬರ್ 2024, 15:50 IST
ಸುನಿಲ್ ಗಾವಸ್ಕರ್
ಸುನಿಲ್ ಗಾವಸ್ಕರ್   

ನವದೆಹಲಿ: ನ್ಯೂಜಿಲೆಂಡ್ ಎದುರು ವಿಫಲರಾಗಿರುವ ವಿರಾಟ್‌ ಕೊಹ್ಲಿ ಅವರಿಗೆ ಈಗ ರನ್‌ಗಳ ಹಸಿವು ಜೋರಾಗಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಈ ಹಿಂದೆ ತೋರಿರುವ ಉತ್ತಮ ಸಾಧನೆಯು ಕೊಹ್ಲಿ ಅವರಿಗೆ ಮುಂಬರುವ ಟೆಸ್ಟ್‌ ಸರಣಿಯಲ್ಲಿ ವಿಶ್ವಾಸ ಮೂಡಿಸಲು ನೆರವಾಗಬಹುದು ಎಂದೂ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ತಿಂಗಳಿಂದ ಕೊಹ್ಲಿ ಹಿಂದೆಂದೂ ಕಾಣದ ರನ್ ಬರ ಎದುರಿಸಿದ್ದಾರೆ. ಆಡಿರುವ ಕೊನೆಯ 60 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ ಎರಡು ಶತಕ ಮತ್ತು 11 ಅರ್ಧ ಶತಕಗಳನ್ನಷ್ಟೇ ಗಳಿಸಿದ್ದಾರೆ.

ಈ ವರ್ಷ ಆರು ಟೆಸ್ಟ್‌ ಪಂದ್ಯಗಳಿಂದ ಅವರ ಸರಾಸರಿ ರನ್‌ 22.72. ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳಿಂದ ಅವರು 93 ರನ್‌ಗಳನ್ನಷ್ಟೇ ಗಳಿಸಿದ್ದಾರೆ.

ADVERTISEMENT

‘ನ್ಯೂಜಿಲೆಂಡ್ ವಿರುದ್ಧ ವಿಫಲರಾಗಿರುವ ಕಾರಣ ಕೊಹ್ಲಿ ಅವರ ರನ್‌ ಹಸಿವು ಹೆಚ್ಚಾಗಿದೆ’ ಎಂದು ಅವರು ಸ್ಟಾರ್‌ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. ನಾಲ್ಕು ಪ್ರವಾಸಗಳಲ್ಲಿ ಅವರು 54.08ರ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ. ಈ ಅಂಶವೇ ಅವರಿಗೆ 22ರಂದು ಆರಂಭವಾಗುವ ಟೆಸ್ಟ್‌ ಸರಣಿಗೆ ವಿಶ್ವಾಸ ಮೂಡಿಸಲು ನೆರವಾಗಲಿದೆ ಎಂಬುದು ‘ಸನ್ನಿ’ ಅನಿಸಿಕೆ.

ಆಸ್ಟ್ರೇಲಿಯಾ ಆಟಗಾರರು ತಮ್ಮನ್ನು ಹೇಗೆ ಗುರಿ ಮಾಡುವರೆಂಬುದು ಕೊಹ್ಲಿ ಅವರಿಗೆ ತಿಳಿಯದ ವಿಚಾರವೇನಲ್ಲ ಎಂದು ಮಾಜಿ ಟೆಸ್ಟ್‌ ಆಟಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ. ‘ಮುಂದೇನು ಕಾದಿದೆ ಎಂಬುದು ಅವರಿಗೆ ಸರಿಯಾಗಿ ತಿಳಿದೇ ಇರುತ್ತದೆ’ ಎಂದಿದ್ದಾರೆ.

ತಮ್ಮನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ಯಾವ ರೀತಿಯ ತಂತ್ರ ಪ್ರಯೋಗಿಸುತ್ತದೆ ಎಂಬ ಬಗ್ಗೆ ಕೊಹ್ಲಿ ಚೆನ್ನಾಗಿ ತಿಳಿದುಕೊಂಡೇ ಇರುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.