ಗುರುಗ್ರಾಮ: ಪಾದದ ನೋವಿನಿಂದ ತಾವು ಪೂರ್ಣ ಗುಣಮುಖರಾಗಿರುವುದಾಗಿ ವೇಗದ ಬೌಲರ್ ಮೊಹಮ್ಮದ್ ಶಮಿ ಘೋಷಿಸಿದ್ದಾರೆ. ಆದರೆ ಮುಂದಿನ ತಿಂಗಳ ಮಧ್ಯದಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸುವಂತಾಗಲು ‘ಒಂದು ಅಥವಾ ಎರಡು’ ದೇಶೀಯ ಪಂದ್ಯಗಳಲ್ಲಿ ಆಡಲು ನಿರ್ಧರಿಸಿದ್ದಾರೆ.
ಕಳೆದ ವರ್ಷದ ಏಕದಿನ ವಿಶ್ವಕಪ್ ನಂತರ ಶಮಿ ಯಾವುದೇ ಪಂದ್ಯದಲ್ಲಿ ಆಡಿಲ್ಲ. ಆದರೆ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯದ ನಂತರ, ಭಾನುವಾರ ಬೌಲಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರು.
ಕಳೆದ ವರ್ಷದ ಪಾದದ ನೋವಿಗೆ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅವರ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು ಎಂದು ನಾಯಕ ರೋಹಿತ್ ಶರ್ಮಾ ಮಾಧ್ಯಮಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು.
‘ಬೆಂಗಳೂರಿನಲ್ಲಿ ಪೂರ್ಣ ರನ್‌ಅಪ್‌ನೊಂದಿಗೆ ಬೌಲಿಂಗ್ ಮಾಡಿದ್ದೆ. ನಾನು ಫಿಟ್ ಆಗಿದ್ದು, ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡೆ. ಫಲಿತಾಂಶ ಉತ್ತಮವಾಗಿತ್ತು. ಒಂದಿಷ್ಟೂ ನೋವು ಕಾಣಿಸಿಕೊಳ್ಳಲಿಲ್ಲ’ ಎಂದು ಅವರು ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಮಾಧ್ಯಮದವರಿಗೆ ತಿಳಿಸಿದರು.
‘ನಾನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗುವೆನೇ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೆ ಅದಕ್ಕೆ ಇನ್ನೂ ಸಾಕಷ್ಟು ಸಮಯ ಇದೆ’ ಎಂದು 34 ವರ್ಷ ವಯಸ್ಸಿನ ಶಮಿ ಹೇಳಿದ್ದಾರೆ.
ನವೆಂಬರ್ 22 ರಂದು ಪರ್ತ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಅದಕ್ಕೆ ಎರಡು ವಾರ ಮೊದಲು ಭಾರತ ತಂಡ ಆಸ್ಟ್ರೇಲಿಯಾಕ್ಕೆ ತೆರಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.