ADVERTISEMENT

T20 WC ಫೈನಲ್‌ಗೆ ಕಿವೀಸ್: ತಂಡದ ಜಯಕ್ಕೆ ಕಾಣಿಕೆ ನೀಡಿದ್ದು ತೃಪ್ತಿಕರ –ಮಿಚೆಲ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 10:53 IST
Last Updated 11 ನವೆಂಬರ್ 2021, 10:53 IST
ಡೆರಿಲ್ ಮಿಚೆಲ್
ಡೆರಿಲ್ ಮಿಚೆಲ್   

ಅಬುಧಾಬಿ: ಪಂದ್ಯದ ಕೊನೆಯ ಹಂತದಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ತಮಗಿರಲಿಲ್ಲ. ಆದರೆ ಅಂತಿಮವಾಗಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದು ಮಾತ್ರ ತೃಪ್ತಿದಾಯಕ ಎಂದು ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ಮನ್ ಡೆರಿಲ್ ಮಿಚೆಲ್ ಹೇಳಿದ್ದಾರೆ.

ಬುಧವಾರ ರಾತ್ರಿ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್ ಐದು ವಿಕೆಟ್‌ಗಳಿಂದ ಜಯಿಸಲು ಡೆರಿಲ್ ಮಿಚೆಲ್ ಅವರ ಬ್ಯಾಟಿಂಗ್ ಕಾರಣವಾಗಿತ್ತು. 47 ಎಸೆತಗಳಲ್ಲಿ 72 ರನ್‌ಗಳನ್ನು ಗಳಿಸಿದ ಅವರಿಗೆ ಪಂದ್ಯದ ಆಟಗಾರ ಗೌರವ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೊನೆಯ ಹಂತದಲ್ಲಿ ಸ್ವಲ್ಪ ಒತ್ತಡ ನಿರ್ಮಾಣವಾಗಿತ್ತು. ಆಗ ಅಲ್ಲಿ ಏನೇನು ನಡೆಯಿತೆಂಬುದು ಸರಿಯಾಗಿ ನೆನಪಿಲ್ಲ. ಆದರೆ ನನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಖುಷಿಯಾಯಿತು’ ಎಂದರು.

ADVERTISEMENT

ಇಲ್ಲಿಯ ಪಿಚ್‌ ಮೇಲೆ ಹೊಸ ಚೆಂಡನ್ನು ಎದುರಿಸುವುದು ಕಠಿಣ ಸವಾಲಿನ ಕೆಲಸ. ಕಾನ್ವೆ ಮತ್ತು ನಿಶಾಮ್ ಆಡಿದ ಕೆಲವು ಹೊಡೆತಗಳು ಚಿತ್ತಾಪಹಾರಿಯಾಗಿದ್ದವು. ಒಂದು ಅಥವಾ ಎರಡು ಉತ್ತಮ ಓವರ್‌ಗಳು ಲಭಿಸಿದರೆ ಗೆಲುವಿನ ಹಾದಿ ಸುಲಭವಾಗುವ ವಿಶ್ವಾಸ ನಮಗಿತ್ತು. ನಿಶಾಮ್ ಅಂತಹದೊಂದು ಅವಕಾಶ ಸೃಷ್ಟಿಸಿಕೊಟ್ಟರು’ ಎಂದು ಮಿಚೆಲ್ ಹೇಳಿದರು.

ಕಿವೀಸ್ ಬಳಗಕ್ಕೆ ಜಯದ ಶ್ರೇಯ ಸಲ್ಲಬೇಕು: ಮಾರ್ಗನ್
‘ನಮ್ಮ ತಂಡದ ಆಟಗಾರರು ಉತ್ತಮವಾಗಿ ಆಡಿದರು. ಆದರೆ ಕೇನ್ ವಿಲಿಯಮ್ಸನ್ ಅವರ ಬಳಗವು ನಮಗಿಂತ ಚೆನ್ನಾಗಿ ಆಡಿದರು. ಕೀವಿಸ್‌ಗೆ ಜಯದ ಶ್ರೇಯ ಸಲ್ಲಬೇಕು’ ಎಂದು ಇಂಗ್ಲೆಂಡ್ ತಂಡದ ನಾಯಕ ಏಯಾನ್ ಮಾರ್ಗನ್ ಅಭಿಪ್ರಾಯಪಟ್ಟಿದ್ದಾರೆ.

‘ನಾವು ಕೂಡ ಹೋರಾಟದ ಮೊತ್ತ ಕಲೆಹಾಕಿದ್ದೆವು. ಆದರೆ, ಎದುರಿಸುವ ಮೊದಲ ಎಸೆತದಲ್ಲಿಯೇ ಸಿಕ್ಸರ್‌ ಹೊಡೆಯುವ ಸಾಮರ್ಥ್ಯವಿರುವ ಜಿಮ್ಮಿ ನಿಶಾಮ್ ಅವರಂತಹ ಬ್ಯಾಟ್ಸ್‌ಮನ್‌ ಇರುವುದು ಕಿವೀಸ್ ತಂಡಕ್ಕೆ ದೊಡ್ಡ ಲಾಭವಾಯಿತು‘ ಎಂದು ಹೇಳಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 166 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ನ್ಯೂಜಿಲೆಂಡ್ ತಂಡವು 19 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 167 ರನ್‌ ಗಳಿಸಿ ಜಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.