ಮುಂಬೈ: ಕಳೆದ ಕೆಲವು ವರ್ಷಗಳಲ್ಲಿ ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಭಾರತೀಯ ಬ್ಯಾಟರ್‌ಗಳ ಕೌಶಲ್ಯವು ಕುಸಿದಿದೆ ಎಂಬ ವಾದವನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಲ್ಲಗಳೆದಿದ್ದಾರೆ.
ಆದರೆ ಟ್ವೆಂಟಿ-20 ಕ್ರಿಕೆಟ್ ಶೈಲಿಯು ಆಟಗಾರರ ರಕ್ಷಣಾತ್ಮಕ ಆಟದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
'ಕೆಲವೊಂದು ಬಾರಿ ಎದುರಾಳಿ ತಂಡಕ್ಕೂ ಶ್ರೇಯ ಸಲ್ಲಬೇಕಾಗುತ್ತದೆ. ಕೊನೆಯ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಹಾಗಿದ್ದರೂ ನಮ್ಮ ದಾಂಡಿಗರು ಕಠಿಣ ಪರಿಶ್ರಮ ವಹಿಸುತ್ತಿದ್ದು, ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ' ಎಂದು ಗಂಭೀರ್ ಹೇಳಿದರು.
'ಅಂತಿಮವಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಲಿತಾಂಶವೇ ಮುಖ್ಯವೆನಿಸುತ್ತದೆ. ಸ್ಪಿನ್ ವಿರುದ್ಧ ನಮ್ಮ ಕೌಶಲ್ಯ ಕುಸಿದಿದೆ ಎಂದು ನಾನು ಭಾವಿಸುವುದಿಲ್ಲ. ಇನ್ನು ಉತ್ತಮ ಪ್ರದರ್ಶನ ನೀಡಲು ನಮ್ಮ ಆಟಗಾರರು ಪರಿಶ್ರಮವಹಿಸುತ್ತಿದ್ದಾರೆ' ಎಂದು ಹೇಳಿದರು.
'10 ವರ್ಷಗಳ ಹಿಂದಿನ ಆಟದ ಸ್ವರೂಪಕ್ಕೆ ಹೋಲಿಸಿದಾಗ ಟಿ20 ಕ್ರಿಕೆಟ್ ಬಹುಶಃ ಪ್ರಭಾವ ಬೀರಿರಬಹುದು. ಆದರೆ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹೊಂದಿಕೊಳ್ಳಲು ಸಾಧ್ಯವಾಗುವ ಆಟಗಾರನೇ ನೈಜ ಆಟಗಾರನಾಗಿರುತ್ತಾನೆ' ಎಂದು ಉಲ್ಲೇಖಿಸಿದರು.
'ಗ್ಯಾಲರಿಯತ್ತ ಚೆಂಡನ್ನು ಹೊಡೆಯುವುದು ಮಾತ್ರ ಬೆಳವಣಿಗೆ ಅಲ್ಲ. ತಿರುವಿನ ಪಿಚ್‌ನಲ್ಲೂ ದೀರ್ಘವಾಧಿಯವರೆಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಬೇಕು. ಅದಕ್ಕಾಗಿ ಭದ್ರ ಅಡಿಪಾಯ ಹೊಂದಿರಬೇಕು. ಆದರೆ ಭವಿಷ್ಯದಲ್ಲೂ ಟಿ20 ಕ್ರಿಕೆಟ್ ಪ್ರಭಾವ ಬೀರುವ ಸಾಧ್ಯತೆ ಇದೆ. ಆಟಗಾರರು ಹೆಚ್ಚು ಟಿ20 ಕ್ರಿಕೆಟ್ ಆಡುವುದರಿಂದ ರಕ್ಷಣಾತ್ಮಕವಾಗಿ ಆಡುವ ಬದಲು ಬಿರುಸಾಗಿ ಆಡಲು ಯತ್ನಿಸುತ್ತಾರೆ' ಎಂದು ಹೇಳಿದರು.
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಸರಣಿ ಸೋಲಿನ ಮುಖಭಂಗಕ್ಕೊಳಗಾಗಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್ ಮತ್ತು ಪುಣೆಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ 113 ರನ್ ಅಂತರದ ಸೋಲಿಗೆ ಶರಣಾಗಿತ್ತು.
ಆ ಮೂಲಕ ತವರು ನೆಲದಲ್ಲಿ 12 ವರ್ಷಗಳ ಬಳಿಕ ಸರಣಿ ಸೋಲಿನ ಆಘಾತಕ್ಕೊಳಗಾಗಿದೆ. ಸರಣಿಯ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮುಂಬೈಯಲ್ಲಿ ನವೆಂಬರ್ 1ರಿಂದ ಆರಂಭವಾಗಲಿದೆ. ಭಾರತ ಈಗ ಸರಣಿ ಕ್ಲೀನ್-ಸ್ವೀಪ್ ಭೀತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.