ADVERTISEMENT

ಒತ್ತಡ, ವೈಫಲ್ಯಗಳನ್ನು ನಿಭಾಯಿಸಲು ಕಲಿತಿದ್ದೇನೆ: ಸಂಜು ಸ್ಯಾಮ್ಸನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2024, 10:01 IST
Last Updated 13 ಅಕ್ಟೋಬರ್ 2024, 10:01 IST
<div class="paragraphs"><p>ಸಂಜು ಸ್ಯಾಮ್ಸನ್</p></div>

ಸಂಜು ಸ್ಯಾಮ್ಸನ್

   

(ಪಿಟಿಐ ಚಿತ್ರ)

ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಿರುಸಿನ ಶತಕದ ಸಾಧನೆ ಮಾಡಿರುವ ಟೀಮ್ ಇಂಡಿಯಾದ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್, ಒತ್ತಡ ಹಾಗೂ ವೈಫಲ್ಯಗಳನ್ನು ನಿಭಾಯಿಸಲು ಕಲಿತಿರುವುದಾಗಿ ತಿಳಿಸಿದ್ದಾರೆ.

ADVERTISEMENT

ಸಂಜು ಶತಕದ ಬಲದೊಂದಿಗೆ ಭಾರತ 20 ಓವರುಗಳಲ್ಲಿ 6 ವಿಕೆಟ್‌ಗೆ 297 ರನ್‌ಗಳ ಭಾರಿ ಮೊತ್ತ ಗಳಿಸಿತು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ಅತ್ಯಧಿಕ ಮೊತ್ತವಾಗಿದೆ.

ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಏಳು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆ ಮೂಲಕ ಭಾರತ 133 ರನ್ ಅಂತರದಿಂದ ಪಂದ್ಯ ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿತು.

ಕೇವಲ 40 ಎಸೆತಗಳಲ್ಲಿ ಚೊಚ್ಚಲ ಶತಕ ಗಳಿಸಿದ ಸಂಜು, ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎನಿಸಿದರು.

ಈ ವೇಳೆ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಕುಮಾರ್ ಅವರು ನೀಡಿರುವ ಬೆಂಬಲಕ್ಕೆ ಸಂಜು ಧನ್ಯವಾದಗಳನ್ನು ಹೇಳಿದ್ದಾರೆ.

ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್

'ಕಳೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಎರಡು ಸಲ ಶೂನ್ಯಕ್ಕೆ ಔಟ್ ಆದ ಬಳಿಕ ಮುಂದಿನ ಸರಣಿಯಲ್ಲಿ ಅವಕಾಶ ಸಿಗುವ ಬಗ್ಗೆ ಸ್ವಲ್ಪ ಅನುಮಾನ ಮೂಡಿತ್ತು. ಆದರೆ ಕೋಚ್ ಹಾಗೂ ನಾಯಕ ನನಗೆ ಬೆಂಬಲ ನೀಡಿದರು. ಏನೇ ಆದರೂ ನಿನ್ನನ್ನು ಬೆಂಬಲಿಸುವುದಾಗಿ ಭರವಸೆ ಕೊಟ್ಟಿದ್ದರು' ಎಂದು ಸಂಜು ವಿವರಿಸಿದ್ದಾರೆ.

'ಭಾರತೀಯ ಕ್ರಿಕೆಟಿಗನಾಗಿ ಮಾನಸಿಕವಾಗಿ ಅನೇಕ ಏರಿಳಿತಗಳನ್ನು ಕಂಡಿದ್ದೇನೆ. ಒತ್ತಡ ಮತ್ತು ವೈಫಲ್ಯಗಳನ್ನು ನಿಭಾಯಿಸಲು ಕಲಿತಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

'ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ವಾತಾವರಣವಿದೆ. ಎಲ್ಲರೂ ನನ್ನನ್ನು ಬೆಂಬಲಿಸುತ್ತಾರೆ. ನನ್ನ ಪ್ರದರ್ಶನದಿಂದ ಅವರೆಲ್ಲರೂ ಸಂತಸಗೊಂಡಿದ್ದಾರೆ' ಎಂದು ಅವರು ಹೇಳಿದ್ದಾರೆ.

'ಸರಣಿ ಆರಂಭಕ್ಕೂ ಮೊದಲೇ ತಾನು ಇನಿಂಗ್ಸ್ ಆರಂಭಿಸುವ ಬಗ್ಗೆ ಖಚಿತ ಮಾಹಿತಿ ನೀಡಿದ್ದರು. ಇದರಿಂದ ಸರಣಿಗೂ ಮುನ್ನ ಪೂರ್ವ ಸಿದ್ಧತೆ ನಡೆಸಲು ನೆರವಾಯಿತು' ಎಂದು ಅವರು ಹೇಳಿದ್ದಾರೆ.

'ನನ್ನ ವೃತ್ತಿ ಜೀವನದಲ್ಲಿ ಅನೇಕ ವೈಫಲ್ಯಗಳನ್ನು ಕಂಡಿದ್ದೇನೆ. ಓರ್ವ ಅನುಭವಿ ಕ್ರಿಕೆಟಿಗನಾಗಿ ನನ್ನ ಕ್ರಿಕೆಟ್‌ ಬಗ್ಗೆ ಹೆಚ್ಚು ಅರ್ಥ ಮಾಡಿಕೊಂಡಿದ್ದೇನೆ. ಆದ್ದರಿಂದ, ವೈಫಲ್ಯಗಳನ್ನು ನಿಭಾಯಿಸಿ ನನ್ನದೇ ರೀತಿಯಲ್ಲಿ ಯಶಸ್ಸು ಗಳಿಸಲು ಬಯಸುತ್ತೇನೆ. ನಾನು ನಾನಾಗಿರಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.