ADVERTISEMENT

ಕೊಹ್ಲಿ ಬಗ್ಗೆ ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದ್ದೇನೆ: ವಿಲಿಯರ್ಸ್

ಪಿಟಿಐ
Published 9 ಫೆಬ್ರುವರಿ 2024, 9:29 IST
Last Updated 9 ಫೆಬ್ರುವರಿ 2024, 9:29 IST
<div class="paragraphs"><p>ಎಬಿ ಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ</p></div>

ಎಬಿ ಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ

   

ಜೊಹಾನೆಸ್‌ಬರ್ಗ್: ‘ವಿರಾಟ್‌ ಕೊಹ್ಲಿ ಅವರ ಕುರಿತು ನಾನು ಸುಳ್ಳು ಮಾಹಿತಿ ನೀಡುವ ಮೂಲಕ ಅತಿ ದೊಡ್ಡ ತಪ್ಪೆ ಮಾಡಿದ್ದೇನೆ’ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎ.ಬಿ. ಡಿವಿಲಿಯರ್ಸ್‌ ಹೇಳಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ತಾವು ಆಡುವುದಿಲ್ಲ ಎಂದು ಭಾರತ ತಂಡದ  ಬ್ಯಾಟಿಂಗ್ ತಾರೆ ಕೊಹ್ಲಿ ಈ ಹಿಂದೆ ಹೇಳಿದ್ದರು. ‘ಅಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ತಮಗೆ ಏನೂ ಗೊತ್ತಿಲ್ಲ’ ಎಂದೂ ಡಿವಿಲಿಯರ್ಸ್‌ ಹೇಳಿದ್ದಾರೆ. (ಇದಕ್ಕಾಗಿ ವಿಲಿಯರ್ಸ್ ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ).

ADVERTISEMENT

‘ಅನುಷ್ಕಾ– ಕೊಹ್ಲಿ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಅವರು ಮೊದಲ ಎರಡು ಟೆಸ್ಟ್‌ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ’ ಎಂದು ಕೆಲವು ದಿನಗಳ ಹಿಂದೆ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು.

ಗುರುವಾರ, ಎಸ್‌ಎಟಿ20 ಪಂದ್ಯಗಳ ವೇಳೆ ಆಯ್ದ ಮಾಧ್ಯಮಗಳ ಜೊತೆ ಸಂವಾದ ನಡೆಸಿದ ಡಿವಿಲಿಯರ್ಸ್ ತಮ್ಮಇತ್ತೀಚಿನ ಹೇಳಿಕೆಯಿಂದ ಹಿಂದೆಸರಿದಿದ್ದಾರೆ.

‘ಮೊದಲು ಕುಟುಂಬ. ಅದಕ್ಕೆ ಆದ್ಯತೆ. ನಂತರ ಕ್ರಿಕೆಟ್‌ ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದೆ. ಅದೇ ಉರಿಸಿರಿನಲ್ಲಿ ಸುಳ್ಳು ಮಾಹಿತಿ ಹಂಚಿಕೊಳ್ಳುವ ಮೂಲಕ ನಾನು ಅತಿ ದೊಡ್ಡ ತಪ್ಪು ಮಾಡಿದೆ. ನಾನು ಹೇಳಿದ್ದು ನಿಜವಲ್ಲ’ ಎಂದು ಎಸ್‌ಎ20 ಟೂರ್ನಿಯ ಪ್ರಚಾರ ರಾಯಭಾರಿಯೂ ಆಗಿರುವ ಆಗಿರುವ ಡಿವಿಲಿಯರ್ಸ್ ಹೇಳಿದರು.

ಕೊಹ್ಲಿ, ಇಂಗ್ಲೆಂಡ್‌ ವಿರುದ್ಧ ಸರಣಿಯ ಉಳಿದ ಪಂದ್ಯಗಳಲ್ಲೂ ಆಡುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.

ಸೂರ್ಯ ಆಟ ನೋಡಲು ತವಕ:

ಟಿ20 ಕ್ರಿಕೆಟ್‌ ವಿಶ್ವಕಪ್‌ಗೆ ಭಾರತವೂ ಪ್ರಬಲ ಸ್ಪರ್ಧಿ ಎಂದು ಹೇಳಿರುವ ‘ಮಿ. 360’ ಖ್ಯಾತಿಯ ಡಿವಿಲಿಯರ್ಸ್ ‘ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಆಟ ನೋಡಲು ಕಾತರದಿಂದ ಇರುವುದಾಗಿ’ ಹೇಳಿದ್ದಾರೆ.

ಡಿವಿಲಿಯರ್ಸ್‌ ಅವರಂತೆ ಸೂರ್ಯ ಅವರನ್ನೂ ವೈವಿಧ್ಯಮಯ ಹೊಡೆತಗಳಿಗಾಗಿ ‘ಮಿ360’ ಎಂದು ಕರೆಯಲಾಗುತ್ತಿದೆ.

‘ಟಿ20 ವಿಶ್ವಕಪ್‌ನಲ್ಲಿ ರಂಜಿಸಬಲ್ಲ ಹಲವು ಆಟಗಾರರಿದ್ದಾರೆ. ಆದರೆ ನಾನು ಸೂರ್ಯಕುಮಾರ್ ಆಟ ನೋಡಲು ಇಷ್ಟಪಡುತ್ತೇನೆ. ನಾನು ಅವರ ದೊಡ್ಡ ಅಭಿಮಾನಿ’ ಎಂದರು.

ಭಾರತ ತಂಡ, ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿಯ ಬರವನ್ನು ನೀಗಿಸಲಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದರು.

‘ನಾನು ಜ್ಯೋತಿಷಿಯಲ್ಲ. ಆದರೆ ಭಾರತ ಪ್ರಬಲ ಸ್ಪರ್ಧಿ. ಹಲವು ವರ್ಷಗಳಿಂದ ಐಪಿಎಲ್‌ ನಡೆಯುತ್ತಿದ್ದು, ಈ ಲೀಗ್ ಭಾರತದ ಕ್ರಿಕೆಟ್‌ನ ಬೇರನ್ನು ಬಲಗೊಳಿಸಿದೆ’ ಎಂದು ಅಭಿಪ್ರಾಯಪಟ್ಟರು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧ ಶತಕ (16 ಎಸೆತಗಳಲ್ಲಿ) ಮತ್ತು ಶತಕದ (31 ಎಸೆತ) ದಾಖಲೆಯನ್ನೂ ಡಿವಿಲಿಯರ್ಸ್‌ ಹೊಂದಿದ್ದಾರೆ. 62 ಎಸೆತಗಳಲ್ಲಿ ಅತಿ ವೇಗದ 150 ರನ್ ಗಳಿಸಿದ ಹೆಗ್ಗಳಿಕೆಯೂ ಅವರದು. 228 ಏಕದಿನ ಪಂದ್ಯಗಳಿಂದ 9,577 ರನ್ ಪೇರಿಸಿರುವ ಅವರು 114 ಟೆಸ್ಟ್‌ಗಳಲ್ಲಿ 8,765 ರನ್ ಕಲೆಹಾಕಿದ್ದಾರೆ. 78 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1672 ರನ್ ಹೊಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.