ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಡಿಸೆಂಬರ್ 19ರಂದು ಅತಿ ದೊಡ್ಡ ಕಳಂಕ ತಟ್ಟಿತ್ತು. ಆಸ್ಟ್ರೇಲಿಯಾ ವಿರುದ್ಧ ಕೇವಲ 36 ರನ್ನಿಗೆ ಸರ್ವಪತನವನ್ನು ಕಂಡ ಟೀಮ್ ಇಂಡಿಯಾ, ತನ್ನ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ಅತಿ ಕನಿಷ್ಠ ಮೊತ್ತ ಗಳಿಸಿದೆ. ಇದು ಟೀಮ್ ಇಂಡಿಯಾ ಹಾಗೂ ಅಭಿಮಾನಿಗಳ ಪಾಲಿಗೆ ಕರಾಳ ಅಧ್ಯಾಯವೇ ಸರಿ.
ಟೆಸ್ಟ್ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಅದು ಕೂಡಾ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಅವರಂತಹ ಸದೃಢ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಟೀಮ್ ಇಂಡಿಯಾದಿಂದ ಇಂತಹದೊಂದು ಕೆಟ್ಟ ಪ್ರದರ್ಶನವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ.
ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಮಾಜಿ ದಿಗ್ಗಜ ಗುಂಡಪ್ಪ ವಿಶ್ವನಾಥ್ ಕೂಡಾ ಇದರಿಂದ ಹೊರತಾಗಿರಲಿಲ್ಲ. ಇಂತಹ ದಿನ ಮರುಕಳಿಸಲಿದೆ ಎಂದು ಎಂದಿಗೂ ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗಾಯದ ಮೇಲೆ ಬರೆ; ಮೊಹಮ್ಮದ್ ಶಮಿ ಸರಣಿಯಿಂದಲೇ ಔಟ್?
46 ವರ್ಷಗಳ ಹಿಂದೆ 1974ನೇ ಇಸವಿಯಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಕೇವಲ 42 ರನ್ನಿಗೆ ಆಲೌಟ್ ಆಗಿರುವುದು ಭಾರತದ ಈ ಹಿಂದಿನ ಅತಿ ಕೆಟ್ಟ ಪ್ರದರ್ಶನವಾಗಿತ್ತು. ಇಂಗ್ಲಿಂಷ್ ವೇಗಿಗಳಾದ ಕ್ರಿಸ್ ಒಲ್ಡ್ ಹಾಗೂ ಜೆಫ್ ಅರ್ನಾಲ್ಡ್ ಅಂದು ಭಾರತವನ್ನು ಮಾರಕವಾಗಿ ಕಾಡಿದ್ದರು.
ಅಂದು ಭಾರತ ತಂಡದ ಅಂಗವಾಗಿದ್ದ ಜಿ. ಆರ್. ವಿಶ್ವನಾಥ್, ತಮ್ಮ ಅನುಭವಗಳನ್ನು ಹಂಚಿಕೊಂಡರು. 'ಅಂತಹ ದಿನ ಮತ್ತೆ ನೋಡಲಿದ್ದೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಆದರೆ ದುಃಖಕರವೆಂದರೆ 46 ವರ್ಷಗಳ ನಂತರ ಮತ್ತೆ ಮರುಕಳಿಸಿದೆ. ನಾವು 42ಕ್ಕೆ ಆಲೌಟ್ ಆಗಿರುವ ಆ ದಿನ ನನಗೀಗಲೂ ನೆನಪಿದೆ. ಅದು ಸಹಿಸಲಾಗದ ಭಾವನೆ. ಇಡೀ ತಂಡವೇ ತೇಜೋವಧೆಗೊಂಡಿತ್ತು. ಒಂದು ತಂಡವಾಗಿ ಕುಸಿಯುವ ಭಾವನೆಯನ್ನು ಹೊಂದಿದ್ದೇವೆ. ಈಗ ಅವರು (ಈಗಿನ ತಂಡ) ಎಂತಹ ಪರಿಸ್ಥಿತಿಯಿಂದ ಹಾದು ಹೋಗಿತ್ತಿರಬಹುದು ಎಂಬುದನ್ನು ನಾನು ಊಹಿಸಭಲ್ಲೆ' ಎಂದು ಹೇಳಿದರು.
ಅದೇ ಹೊತ್ತಿಗೆ ಆಸ್ಟ್ರೇಲಿಯಾ ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಅತ್ಯುತ್ತಮ ದಾಳಿ ಸಂಘಟಿಸಿದರು ಎಂದು ಜಿ.ಆರ್. ವಿಶ್ವನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.