ನವದೆಹಲಿ: 2007ರ ಟಿ-20 ವಿಶ್ವಕಪ್ ಸಂದರ್ಭದಲ್ಲಿ ನಾನು ಟೀಂ ಇಂಡಿಯಾದ ಕ್ಯಾಪ್ಟನ್ ಆಗಬೇಕು ಅಂದುಕೊಂಡಿದ್ದೆ. ಅಷ್ಟರಲ್ಲಿ ಎಂ.ಎಸ್.ಧೋನಿ ಹೆಸರನ್ನು ಘೋಷಿಸಲಾಗಿತ್ತು ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಹೌದು, ಯುವರಾಜ್ ಸಿಂಗ್ ಅವರು ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ತಮ್ಮ ಅತ್ಯುತ್ತಮ ಆಟದ ಮೂಲಕ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪಂಜಾಬ್ ಮೂಲದ ಯುವಿ ರಾಷ್ಟ್ರೀಯ ತಂಡದ ನಾಯಕರಾಗುತ್ತಾರೆ ಎನ್ನುವುದು ಅವರ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯುವರಾಜ್ ಅವರನ್ನು ಕಡೆಗಣಿಸಿ ಧೋನಿ ಅವರಿಗೆ ನಾಯಕತ್ವ ವಹಿಸಿತ್ತು.
ಇತ್ತೀಚಿಗೆ '22 ಯಾರ್ನ್ಸ್ ವಿಥ್ ಗೌರವ್ ಕಪೂರ್' ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯುವರಾಜ್ ಸಿಂಗ್, ‘2007ರ ಟಿ-20 ವಿಶ್ವಕಪ್ ಸಂದರ್ಭದಲ್ಲಿ ನಾನು ಟೀಂ ಇಂಡಿಯಾದ ಕ್ಯಾಪ್ಟನ್ ಆಗಬೇಕು ಅಂದುಕೊಂಡಿದ್ದೆ’ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
‘2006 -07ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಸೋತಿದ್ದು ಏಕೆ? ಎಂಬ ಪ್ರಶ್ನೆಗೆ ಉತ್ತರಿಸಿರುವ ಯುವಿ, ‘ವಿಶ್ವಕಪ್ ಟೂರ್ನಿ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸವಿತ್ತು. ಬಳಿಕ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವೆ ಒಂದು ತಿಂಗಳ ಪ್ರವಾಸವೂ ಇತ್ತು. ಒಂದು ತಿಂಗಳ ಅಂತರದಲ್ಲಿ ಟಿ–20 ವಿಶ್ವಕಪ್ ಇತ್ತು. ಹಾಗಾಗಿ ಅಂದು ತಂಡದಲ್ಲಿ ಹಲವು ಗೊಂದಲಗಳಿದ್ದವು’ ಎಂದು ಹೇಳಿದ್ದಾರೆ.
ತಂಡದ ಹಿರಿಯ ಆಟಗಾರರು ವಿಶ್ರಾಂತಿ ಬಯಸಿದ್ದರು. ಯಾರೂ ಕೂಡ ಟಿ–20 ವಿಶ್ವಕಪ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೇ ಸಂದರ್ಭದಲ್ಲಿ ನಾನು ತಂಡದ ನಾಯಕನಾಗುವ ನಿರೀಕ್ಷೆಯಲ್ಲಿದ್ದೆ. ಆದರೆ, ಧೋನಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಯಿತು’ ಎಂದು ಯುವಿ ತಿಳಿಸಿದ್ದಾರೆ.
2007ರ ಟಿ-20 ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ನಿರ್ಣಾಯಕ ಪಾತ್ರವಹಿಸಿದ್ದರು. 2011ರ ವಿಶ್ವಕಪ್‌ನಲ್ಲಿ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.