ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಟಿಕೆಟ್ ರಹಿತ ಅಫ್ಗಾನಿಸ್ತಾನದ ಅಭಿಮಾನಿಗಳು ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ್ದಾರೆ.
ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಎದುರುಗಡೆ ಜಮಾಯಿಸಿದ ಸಾವಿರಾರು ಸಂಖ್ಯೆಯ ಅಫ್ಗನ್ ಅಭಿಮಾನಿಗಳು, ಬಲವಂತವಾಗಿ ಸ್ಟೇಡಿಯಂ ಒಳಗಡೆ ಪ್ರವೇಶಿಸಲು ಯತ್ನಿಸಿದ್ದರು. ಇದರಿಂದಾಗಿ ಟಿಕೆಟ್ ಖರೀದಿಸಿದ್ದ ಯಥಾರ್ಥ ಅಭಿಮಾನಿಗಳಿಗೆ ಸ್ಟೇಡಿಯಂ ಒಳಗಡೆ ಪ್ರವೇಶಿಸಿ ಪಂದ್ಯ ವೀಕ್ಷಿಸಲು ಸಾಧ್ಯವಾಗಲಿಲ್ಲ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಸಮಗ್ರ ತನಿಖೆ ನಡೆಸುವಂತೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಸೂಚಿಸಿದೆ. ಅಲ್ಲದೆ ಇದರಿಂದ ಪಾಠ ಕಲಿತು ಮುಂದೆ ಇಂತಹ ಪರಿಸ್ಥಿತಿ ಎದುರಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದೆ.
ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ನಡುವಣ ಶುಕ್ರವಾರದ ಪಂದ್ಯಕ್ಕಾಗಿ 16,000 ಟಿಕೆಟ್‌ಗಳನ್ನು ವಿತರಿಸಲಾಗಿತ್ತು. ಆದರೆ ಟಿಕೆಟ್ ಖರೀದಿಸದ ಸಾವಿರಾರು ಅಫ್ಗನ್ ಅಭಿಮಾನಿಗಳು ಸ್ಟೇಡಿಯಂ ಎದುರುಗಡೆ ಜಮಾಯಿಸಿದ್ದರು. ಅಲ್ಲದೆ ಬಲವಂತವಾಗಿ ಸ್ಟೇಡಿಯಂ ಒಳಗೆ ನುಗ್ಗಲು ಯತ್ನಿಸಿದರು. ಇದರಿಂದಾಗಿಸಮಸ್ಯೆ ಸೃಷ್ಟಿಯಾಗಿತ್ತು.
ಬಳಿಕ ದುಬೈ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳು ನೆರೆದಿದ್ದ ಪ್ರೇಕ್ಷಕರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಸರಿಸುಮಾರು ಸ್ಥಳೀಯ ಸಮಯ 7 ಗಂಟೆಯ ವೇಳೆಗೆ ದುಬೈ ಪೊಲೀಸರು ಸ್ಟೇಡಿಯಂನ ಎಲ್ಲ ಗೇಟ್‌ಗಳನ್ನು ಮುಚ್ಚುಗಡೆಗೊಳಿಸಿದರು. ಈ ಮೂಲಕ ಸ್ಟೇಡಿಯಂ ಒಳಗಡೆಯ ಭದ್ರತೆಯನ್ನು ಖಚಿತಪಡಿಸಿದರು.
ಟಿಕೆಟ್ ಖರೀದಿಸಿಯೂ ಪಂದ್ಯ ವೀಕ್ಷಿಸಲು ಸಾಧ್ಯವಾಗದ ಅಭಿಮಾನಿಗಳಲ್ಲಿ ಐಸಿಸಿ, ಬಿಸಿಸಿಐ ಹಾಗೂ ಇಸಿಬಿ ಕ್ಷಮೆ ಕೋರಿದೆ.
ಪಂದ್ಯದ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಅಫ್ಗಾನಿಸ್ತಾನದ ನಾಯಕ ಮೊಹಮ್ಮದ್ ನಬಿ, 'ದಯವಿಟ್ಟು ಟಿಕೆಟ್ ಖರೀದಿಸಿ ಸ್ಟೇಡಿಯಂಗೆ ಬನ್ನಿ ಎಂದು ನಾನು ಅಫ್ಗನ್ ಅಭಿಮಾನಿಗಳಲ್ಲಿ ವಿನಂತಿ ಮಾಡುತ್ತೇನೆ. ಇದನ್ನು ಮತ್ತೆ ಪುನರಾವರ್ತಿಸಬೇಡಿ, ಇದು ಒಳ್ಳೆಯದಲ್ಲ' ಎಂದು ಹೇಳಿದ್ದಾರೆ.
ಏತನ್ಮಧ್ಯೆ ಅಫ್ಗಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.