ಕರಾಚಿ: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾಡೆಲ್ ಮೂಲಕ ಸರಣಿ ಆಯೋಜನೆ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ(ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ಕೇಳಿದೆ.
ಈ ಕುರಿತಂತೆ ಐಸಿಸಿಯಿಂದ ಇಮೇಲ್ ಸ್ವೀಕರಿಸಿರುವುದಾಗಿ ಪಿಸಿಬಿ ಖಚಿತಪಡಿಸಿದ್ದು, ಭಾರತವು ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದೆ ಎಂದು ಅದು ತಿಳಿಸಿದೆ.
ಪಿಸಿಬಿಯು ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದಿಂದ ಹಿಂದೆ ಸರಿಯದಿದ್ದರೆ, ಯುಎಇಯಲ್ಲಿ ಭಾರತದ ಪಂದ್ಯಗಳನ್ನು ಮತ್ತು ಫೈನಲ್ ಅನ್ನು ದುಬೈನಲ್ಲಿ ನಡೆಸುವುದು ಪ್ರಸ್ತುತ ಐಸಿಸಿ ಯೋಜನೆಯಾಗಿದೆ ಎಂದು ಮೂಲವೊಂದು ಸೋಮವಾರ ಪಿಟಿಐಗೆ ತಿಳಿಸಿದೆ.
ಹೈಬ್ರಿಡ್ ಮಾದರಿಯಲ್ಲೂ ಪಂದ್ಯಾವಳಿಯ ಫೈನಲ್ ಪಂದ್ಯವು ದುಬೈನಲ್ಲಿ ನಡೆದರೆ ಮಾತ್ರ ನಮಗೆ ಹೈಬ್ರಿಡ್ ಮಾದರಿಯು ಸ್ವೀಕಾರಾರ್ಹವಾಗಿರುತ್ತದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಐಸಿಸಿಗೆ ಸ್ಪಷ್ಟಪಡಿಸಿದೆ.
ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ಕುರಿತಂತೆ ಪಿಸಿಬಿ ಈವರೆಗೆ ಐಸಿಸಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೂಲಗಳ ಪ್ರಕಾರ, ಹೈಬ್ರಿಡ್ ಮಾದರಿ ಬಗ್ಗೆ ಖಚಿತಪಡಿಸಿ ಅಥವಾ ಭಾರತ ಪಂದ್ಯಗಳು ಮತ್ತು ಫೈನಲ್ ಎಲ್ಲಿ ನಡೆಸುವುವಿರಿ ಎಂದು ಖಚಿತಪಡಿಸುವಂತೆ ಐಸಿಸಿಯು ಪಿಸಿಬಿಯನ್ನು ಕೇಳಿದೆ.
‘ಹೈಬ್ರಿಡ್ ಮಾದರಿ ಮೂಲಕ ಪಂದ್ಯಾವಳಿ ಆಯೋಜನೆಗೆ ಪಿಸಿಬಿ ನಿರ್ಧರಿಸಿದರೆ ಸಂಪೂರ್ಣ ಆತಿಥ್ಯ ಶುಲ್ಕವನ್ನು ಪಿಸಿಬಿ ಪಡೆಯಲಿದೆ’ಎಂದು ಮೂಲಗಳು ತಿಳಿಸಿವೆ.
ಭಾರತದ ನಿರ್ಧಾರದಿಂದ ಬೇಸತ್ತು ಪಿಸಿಬಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯವನ್ನೇ ಕೈಬಿಟ್ಟರೆ, ಸಂಪೂರ್ಣ ಸರಣಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವ ಇರಾದೆಯಲ್ಲಿ ಐಸಿಸಿ ಇದೆ.
ಹೈಬ್ರಿಡ್ ಮಾದರಿ ಬಗ್ಗೆ ಈವರೆಗೆ ಯಾವುದೇ ಮಾತುಕತೆ ನಡೆದಿಲ್ಲ. ಈ ಬಗ್ಗೆ ಐಸಿಸಿ ಬಳಿ ಸ್ಪಷ್ಟನೆ ಕೇಳಲಾಗುವುದು ಎಂದು ಈ ಹಿಂದೆ ಪಿಸಿಬಿ ಹೇಳಿತ್ತು.
ತನ್ನ ಕಾನೂನು ವಿಭಾಗದ ಸಲಹೆ ಪಡೆದು ಭಾರತೀಯ ಕ್ರಿಕೆಟ್ ಮಂಡಳಿಯ ನಿರ್ಧಾರದ ಕುರಿತಂತೆ ಸ್ಪಷ್ಟನೆ ಕೇಳಿ ಐಸಿಸಿಗೆ ಪಿಸಿಬಿ ಇಮೇಲ್ ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ಇದೀಗ ಪಿಸಿಬಿಯಿಂದ ಸಂಪೂರ್ಣ ಪರಿಸ್ಥಿತಿಯ ಅವಲೋಕನ ನಡೆಸಲಾಗುತ್ತಿದೆ. ಮುಂದಿನ ಹಂತದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಗತ್ಯಬಿದ್ದರೆ ಸಮಾಲೋಚನೆ ಮತ್ತು ನಿರ್ದೇಶನಗಳಿಗಾಗಿ ಪಿಸಿಬಿ ಸರ್ಕಾರದ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.