ಕರಾಚಿ: ಭಾರತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವುದಕ್ಕೆ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ ಬೆನ್ನಲ್ಲೇ, ಟೂರ್ನಿಯ ಆತಿಥ್ಯವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ), ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಪ್ರತಿಕ್ರಿಯೆ ಬಯಸಿದೆ.
ಭಾರತ ತಂಡವು ನೆರೆಯ ರಾಷ್ಟ್ರಕ್ಕೆ ಹೋಗಿ ಆಡಲು ನಿರಾಕರಿಸಿರುವ ಬಗ್ಗೆ ಐಸಿಸಿಯಿಂದ ಇ–ಮೇಲ್ ಬಂದಿರುವುದಾಗಿ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ಖಚಿತಪಡಿಸಿತ್ತು.
‘ಪಿಸಿಬಿಯು ಟೂರ್ನಿಯ ಆತಿಥ್ಯದಿಂದ ಹಿಂದೆ ಸರಿಯದೇ ಹೋದರಲ್ಲಿ, ಹೊಸ ಯೋಜನೆಯ ಪ್ರಕಾರ ಭಾರತದ ಪಂದ್ಯಗಳನ್ನು ಯುಎಇಯಲ್ಲಿ ಆಡಬೇಕಾಗುತ್ತದೆ’ ಎಂದು ಮೂಲವೊಂದು ಸೋಮವಾರ ಪಿಟಿಐಗೆ ತಿಳಿಸಿದೆ.
ಫೈನಲ್ ಪಂದ್ಯವನ್ನೂ ಪಾಕ್‌ನಲ್ಲಿ ನಡೆಸದೇ ದುಬೈನಲ್ಲೇ ನಡೆಸುವುದಾದರೆ ಮಾತ್ರ ಹೈಬ್ರಿಡ್ ಮಾದರಿಗೆ ಸಮ್ಮತಿಸುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಗೆ ತಿಳಿಸಿದೆ ಎಂದು ಈ ಮೂಲ ಖಚಿತಪಡಿಸಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತವು ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐ, ಐಸಿಸಿಗೆ ತಿಳಿಸಿರುವುದಕ್ಕೆ ಸಂಬಂಧಿಸಿ ಪಿಸಿಬಿ ಮೌನವಾಗಿದ್ದು, ಸೋಮವಾರವೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದರೆ ದುಬೈನಲ್ಲಿ ಭಾರತದ ಪಂದ್ಯಗಳನ್ನು ಮತ್ತು ಫೈನಲ್ ನಡೆಸುವುದು ಸೇರಿದಂತೆ ಹೈಬ್ರಿಡ್ ಮಾದರಿ ಸ್ವೀಕಾರಾರ್ಹವೇ ಎಂಬುದನ್ನು ತಿಳಿಸುವಂತೆ ಐಸಿಸಿಯು ಪಿಸಿಬಿಗೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಈ ಏರ್ಪಾಡು ಪ್ರಕಾರ, ಟೂರ್ನಿಯ ಪೂರ್ಣ ಆತಿಥ್ಯ ಶುಲ್ಕವನ್ನು ಮತ್ತು ಹೆಚ್ಚಿನ ಪಂದ್ಯಗಳನ್ನು ನಡೆಸುವ ಅವಕಾಶವನ್ನು ಪಾಕಿಸ್ತಾನಕ್ಕೆ ನೀಡಲಾಗುವುದು ಎಂದು ಐಸಿಸಿಯು ಪಾಕ್ ಮಂಡಳಿಗೆ ಭರವಸೆ ನೀಡಿದೆ.
2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ನಡೆದ ನಂತರ ಭಾರತ ತಂಡವು ಪಾಕಿಸ್ತಾದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಐಸಿಸಿ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.