ದುಬೈ: ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನವೆಂಬರ್ 29ರಂದು ವರ್ಚುವಲ್ ಸಭೆ ನಡೆಸಲಿದೆ.
ಪಾಕಿಸ್ತಾನದಲ್ಲಿ ಆಡಲು ಭಾರತ ತಂಡ ನಿರಾಕರಿಸಿದ ಹಿನ್ನೆಲೆ ಪಂದ್ಯಾವಳಿ ವಿಳಂಬವಾಗಿದೆ. 2008ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಭಾರತ, ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿಲ್ಲ.
ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಬೇಕೆಂಬುದು ಭಾರತ ತಂಡದ ಬೇಡಕೆಯಾಗಿದೆ. ದುಬೈ, ಭಾರತದ ಆದ್ಯತೆಯ ಸ್ಥಳವಾಗಿದೆ. ಇದಕ್ಕೆ ಪಾಕಿಸ್ತಾನ ಈವರೆಗೆ ಒಪ್ಪಿಗೆ ಸೂಚಿಸಿಲ್ಲ.
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ನಿರ್ಧರಿಸುವ ಕುರಿತಂತೆ ಚರ್ಚಿಸಲು ನವೆಂಬರ್ 29ರಂದು ಐಸಿಸಿ ಮಂಡಳಿ ಸಭೆ ನಡೆಯಲಿದೆ ಎಂದು ಐಸಿಸಿ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ಡಿಸೆಂಬರ್ 1ರಂದು ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ಸ್ವೀಕರಿಸಲಿದ್ದು, ಅದಕ್ಕೂ ಎರಡು ದಿನ ಮುನ್ನವೇ ಮಹತ್ವ ಐಸಿಸಿ ಮಂಡಳಿ ಸಭೆ ನಡೆಯುತ್ತಿದೆ.
ಹೊಸ ಆಡಳಿತ ಆರಂಭಕ್ಕೂ ಮುನ್ನವೇ ಸಮಸ್ಯೆ ಬಗೆಹರಿಸಲು ಐಸಿಸಿ ಮತ್ತು ಇತರೆ ದೇಶಗಳ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿವೆ.
ಹೈಬ್ರಿಡ್ ಮಾದರಿಯಲ್ಲಿ ಭಾರತದ ಪಂದ್ಯಗಳು ಪಾಕಿಸ್ತಾನದ ಹೊರಗೆ ನಡೆಸಬೇಕೆಂಬ ತನ್ನ ನಿರ್ಧಾರದಲ್ಲಿ ಭಾರತ ಸರ್ಕಾರ ಅಚಲವಾಗಿದೆ. ಹೈಬ್ರಿಡ್ ಮಾದರಿಗೆ ಪಿಸಿಬಿ ಒಪ್ಪಿದರೆ 70 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಆಫರ್ ಅನ್ನು ಐಸಿಸಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್‌ನ ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗಿತ್ತು.
1996ರ ವಿಶ್ವಕಪ್ ಬಳಿಕ ಆಯೋಜಿಸುತ್ತಿರುವ ಪ್ರಮುಖ ಐಸಿಸಿ ಪಂದ್ಯಾವಳಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನವು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಣ ಮಾಡಿದೆ.
2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಬಸ್ ಮೇಲಿನ ದಾಳಿ ಬಳಿಕ ದೂರ ಉಳಿದಿದ್ದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಇತ್ತೀಚೆಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.