ನವದೆಹಲಿ: 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭದ್ರತಾ ದೃಷ್ಟಿಯಿಂದ ಬಿಸಿಸಿಐ ನಿರಾಕರಿಸಿದೆ.
ಇದರ ಬದಲಾಗಿ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿಸುವ ಪ್ರಸ್ತಾವನೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಿಟ್ಟಿದೆ. ತನ್ನ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪಂದ್ಯಾವಳಿಯನ್ನು ದುಬೈಗೆ ಸ್ಥಳಾಂತರಿಸುವ ಕುರಿತು ಪತ್ರ ಬರೆಯಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2025ರ ಫೆ. 19ರಿಂದ ಮಾರ್ಚ್ 5ರವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಗತ್ತಿನ ಪ್ರಮುಖ 8 ತಂಡಗಳು ಪಾಲ್ಗೊಳ್ಳಲಿವೆ. ಈ ಬಾರಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದ್ದು, ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿಯಲ್ಲಿ ಆಡಿಸುವುದಾಗಿ ಹೇಳಿದೆ.
‘ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕುರಿತು ಸರ್ಕಾರದ ಗಮನಕ್ಕೆ ತರಲಾಗಿತ್ತು. ಸರ್ಕಾರದ ನಿರ್ಧಾರದಂತೆ ಮಂಡಳಿ ನಿರ್ಣಯ ಕೈಗೊಂಡಿದೆ. 2023ರ ಏಷ್ಯಾ ಕಪ್ ಕೂಡಾ ಆರಂಭದಲ್ಲಿ ಪಾಕಿಸ್ತಾನದಲ್ಲೇ ಆಯೋಜನೆಗೊಂಡಿತ್ತು. ಆದರೆ, ನಂತರ ಇದನ್ನು ಬದಲಿಸಿ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಆಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದರಲ್ಲಿ ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ದ್ವೀಪರಾಷ್ಟ್ರದಲ್ಲೇ ಆಡಿತ್ತು.
ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಲ್ಗೊಂಡಿದ್ದರು. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸೌಹಾರ್ದತೆ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವ ಮುಹಮ್ಮದ್ ಇಷ್ಕ್ ದಾರ್ ಹಾಗೂ ಆಂತರಿಕ ಸಚಿವ ಹಾಗೂ ಪಿಸಿಬಿ ಅಧ್ಯಕ್ಷ ಮೊಹಸಿನ್ ರಾಝಾ ನಖ್ವಿ ಅವರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆ ಇತ್ತು. ಆದರೆ ಅದು ಕೈಗೂಡಲಿಲ್ಲ.
ಈ ನಡುವೆ ಭಾರತ ತಂಡವು ಪಾಕಿಸ್ತಾನದಲ್ಲಿ ತನ್ನ ಪಂದ್ಯ ಮುಗಿಸಿ ಅದೇ ದಿನ ಭಾರತ ತಂಡ ಸ್ವದೇಶಕ್ಕೆ ಮರಳುವ ಪ್ರಸ್ತಾವನೆಯನ್ನೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿಟ್ಟಿತ್ತು. ಅಂತಿಮವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಎರಡು ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ನಡುವಿನ ತಿಕ್ಕಾಟವನ್ನು ಪರಿಹರಿಸಬೇಕಿದೆ ಎಂದು ವರದಿಯಾಗಿದೆ.
2006ರಲ್ಲಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದೇ ನೆರೆಯ ರಾಷ್ಟ್ರಕ್ಕೆ ಕೊನೆಯ ಪ್ರವಾಸವಾಗಿದೆ. ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ತಂಡದ ನಾಯಕರಾಗಿದ್ದರು. ಐದು ಏಕದಿನ ಪಂದ್ಯಗಳಲ್ಲಿ ಭಾರತವು 4–1ರಿಂದ ಸರಣಿ ತನ್ನದಾಗಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.