ಬೆಂಗಳೂರು: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಧಿಕೃತ ಗೀತೆಯನ್ನು ಬುಧವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜಾಲತಾಣದಲ್ಲಿ ಬಿಡುಗಡೆ ಮಾಡಲಾಯಿತು.
ಬಾಲಿವುಡ್ ತಾರೆ ರಣವೀರ್ ಸಿಂಗ್ ಮತ್ತು ಸಹಕಲಾವಿದರ ನೃತ್ಯ ಮತ್ತು ಕ್ರಿಕೆಟ್ ಆಟದ ಪ್ರಾತ್ಯಕ್ಷಿಕೆ ಇರುವ ‘ದಿಲ್ ಜಶ್ನ್ ಬೋಲೆ..’ ಗೀತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಲಭಿಸಿದೆ.
ಬಹಳಷ್ಟು ಕ್ರಿಕೆಟ್ ಅಭಿಮಾನಿಗಳು ಈ ಗೀತೆಯನ್ನು ಕಳಪೆ ಎಂದು ಟೀಕಿಸಿದ್ದಾರೆ. ‘ಒನ್ ಡೇ ಎಕ್ಸ್‌ಪ್ರೆಸ್‘ ಹೆಸರಿನ ಕಾಲ್ಪನಿಕ ರೈಲು ಬೋಗಿಯೊಂದರಲ್ಲಿ ರಣವೀರ್ ಮತ್ತು ಸಹಕಲಾವಿದರು ನರ್ತಿಸುವ ದೃಶ್ಯಗಳಿವೆ.
ಆದರೆ 2015 ಮತ್ತು 2011ರ ವಿಶ್ವಕಪ್ ಟೂರ್ನಿಗಳ ಸಂದರ್ಭದಲ್ಲಿ ಸಿದ್ಧಪಡಿಸಲಾಗಿದ್ದ ಗೀತೆಗಳು ಉತ್ತಮವಾಗಿದ್ದವು. ಇದು ಕಳಪೆಯಾಗಿದೆ. ಕೇಳಲಾಗದೇ ಕಿವಿ ಮುಚ್ಚಿಕೊಳ್ಳಬೇಕೆನಿಸುತ್ತದೆ ಎಂದು ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಈ ಹಾಡಿನಲ್ಲಿ ಯಾವುದೇ ಕ್ರಿಕೆಟ್ ತಾರೆಗಳನ್ನು ತೋರಿಸಿಲ್ಲವೆಂದೂ ಕೆಲವರು ಟೀಕಿಸಿದ್ದಾರೆ.
ಈ ಗೀತೆಗೆ ಪ್ರೀತಂ ಸಂಗೀತ ನೀಡಿದ್ದಾರೆ. ಶ್ಲೋಕ್ ಲಾಲ್, ಸಾವೇರಿ ವರ್ಮಾ ಗೀತೆ ಬರೆದಿದ್ದಾರೆ. ಪ್ರೀತಂ, ನಕಾಶ್ ಅಜೀಜ್, ಶ್ರೀರಾಂ ಚಂದ್ರಾ, ಅಮಿತ್ ಮಿಶ್ರಾ, ಜೊನಿತ್ ಗಾಂಧಿ, ಆಕಾಶ, ಚರಣ್ ಅವರು ಹಾಡಿದ್ದಾರೆ. ಈ ಗೀತೆಯ ಒಂದು ಭಾಗವು ರ‍್ಯಾಪ್ ಸಂಗೀತದೊಂದಿಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.