ಹರಾರೆ: ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಯತ್ನದಲ್ಲಿರುವ ನೆದರ್ಲೆಂಡ್ಸ್ ತಂಡ ಸೋಮವಾರ ನಡೆದ ಅರ್ಹತಾ ಟೂರ್ನಿಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಒಮಾನ್ ವಿರುದ್ಧ ಸುಲಭ ಜಯ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 48 ಓವರುಗಳಲ್ಲಿ 7 ವಿಕೆಟ್‌ಗೆ 362 ರನ್ ಗಳಿಸಿತು. ಈ ಹಂತದಲ್ಲಿ ಮಂದ ಬೆಳಕು, ಮಳೆಯಿಂದ ಪಂದ್ಯಕ್ಕೆ ಕೆಲಕಾಲ ಅಡ್ಡಿಯಾಯಿತು. ನಂತರ ಡಕ್‌ವರ್ತ್ ಲೂಯಿಸ್ ನಿಯಮದಡಿ ಒಮಾನ್ ಗೆಲುವಿಗೆ 44 ಓವರುಗಳಲ್ಲಿ 321 ರನ್ ಗಳಿಸುವ ಸವಾಲು ನೀಡಲಾಯಿತು. ಒಮಾನ್ ತಂಡ 6 ವಿಕೆಟ್‌ಗೆ 244 ರನ್ ಗಳಿಸಲು ಮಾತ್ರ ಶಕ್ತವಾಗಿ, ಎದುರಾಳಿ ತಂಡ 74 ರನ್‌ಗಳ ಜಯಪಡೆಯಿತು.
ನೆದರ್ಲೆಂಡ್ಸ್ ಪರ ಆರಂಭ ಆಟಗಾರ ವಿಕ್ರಮ್‌ಜಿತ್ ಸಿಂಗ್ 109 ಎಸೆತಗಳಲ್ಲಿ 110 ರನ್ ಹೊಡೆದರೆ, ಮಧ್ಯಮ ಕ್ರಮಾಂಕದಲ್ಲಿ ವೆಸ್ಲಿ ಬರೆಸಿ ಬ್ಯಾಟ್ ಬೀಸಿ 65 ಎಸೆತಗಳಲ್ಲಿ 97 ರನ್ ಬಾರಿಸಿದರು. ಇದರಲ್ಲಿ 10 ಬೌಂಡರಿ, ಮೂರು ಸಿಕ್ಸರ್‌ಗಳಿದ್ದವು. ಒಮಾನ್ ಪರ ಮಧ್ಯಮ ಕ್ರಮಾಂಕದ ಆಟಗಾರ ಅಯಾನ್ ಖಾನ್ 92 ಎಸೆತಗಳಲ್ಲಿ 105 ರನ್ ಹೊಡೆದು ಹೋರಾಟ ತೋರಿದರು. ಅವರ ಆಟದಲ್ಲಿ 11 ಬೌಂಡರಿ, ಎರಡು ಸಿಕ್ಸರ್‌ಗಳಿದ್ದವು.
ಈ ದೊಡ್ಡ ಗೆಲುವಿನ ಅಂತರದಿಂದ ನೆದರ್ಲೆಂಡ್ ರನ್ ದರ ಏರಿಕೆಯಾಗಿದೆ. ಮಂಗಳವಾರ ಆತಿಥೇಯ ಜಿಂಬಾಬ್ವೆ, ಸ್ಕಾಟ್ಲೆಂಡ್ ವಿರುದ್ಧ ಗೆದ್ದರೆ ಎರಡನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ. ಒಂದೊಮ್ಮೆ ಸೋತರೆ ಗುರುವಾರ ನಡೆಯುವ ಸ್ಕಾಟ್ಲೆಂಡ್– ನೆದರ್ಲೆಂಡ್ಸ್ ನಡುವಣ ಪಂದ್ಯ ನಿರ್ಣಾಯಕ ಆಗಲಿದೆ. ಶ್ರೀಲಂಕಾ ಈಗಾಗಲೇ ಅರ್ಹತೆ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.