ADVERTISEMENT

ಐಸಿಸಿ ಮಹಿಳಾ ವಿಶ್ವಕಪ್‌: ತಂಡಗಳ ಹೆಚ್ಚಳಕ್ಕೆ ಚಿಂತನೆ

ಪಿಟಿಐ
Published 8 ಮಾರ್ಚ್ 2021, 12:32 IST
Last Updated 8 ಮಾರ್ಚ್ 2021, 12:32 IST
ಐಸಿಸಿ ಲೋಗೊ
ಐಸಿಸಿ ಲೋಗೊ   

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆಯೋಜಿಸುವ ಮಹಿಳೆಯರ ಕ್ರಿಕೆಟ್‌ ಟೂರ್ನಿಗಳಿಗೆ 2026ರಿಂದ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆದಿದೆ. ಅಂತರರಾಷ್ಟ್ರೀಯ ಮಹಿಳಾ ದಿನವಾದ ಸೋಮವಾರ ವಿಶ್ವ ಕ್ರಿಕೆಟ್ ಮಂಡಳಿ ಈ ವಿಷಯವನ್ನು ತಿಳಿಸಿದೆ.

2026ರ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ 10ರ ಬದಲಾಗಿ 12 ತಂಡಗಳು ಇರಲಿವೆ. 2029ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಈ ಸಂಖೆಯನ್ನು ಎಂಟರಿಂದ 10ಕ್ಕೆ ಏರಿಸಲಾಗುವುದು ಎಂದು ಐಸಿಸಿ ಹೇಳಿದೆ.

‘ಮಹಿಳಾ ಟೂರ್ನಿಗಳಿಗೆ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರಸಾರ ವ್ಯಾಪ್ತಿ ಮತ್ತು ಮಾರ್ಕೆಟಿಂಗ್‌ನಲ್ಲಿ ಹೂಡಿಕೆ ಮಾಡುತ್ತಿದ್ದೇವೆ. 2020ರ ಟಿ20 ವಿಶ್ವಕಪ್ ಟೂರ್ನಿಯನ್ನು ದಾಖಲೆಯ 100 ಕೋಟಿಗಿಂತ ಅಧಿಕ ಮಂದಿ ವಿಡಿಯೋಗಳ ಮೂಲಕ ವೀಕ್ಷಿಸಿದ್ದರು‘ ಐಸಿಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸಾಹ್ನಿ ಹೇಳಿದ್ದಾರೆ.

ADVERTISEMENT

ಮೆಲ್ಬರ್ನ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 2020ರ ಟಿ20 ವಿಶ್ವಕಪ್‌ ಫೈನಲ್‌ಗೆ 86,174 ಪ್ರೇಕ್ಷಕರು ಸಾಕ್ಷಿಯಾಗಿದ್ದರು. ಮಹಿಳಾ ಕ್ರಿಕೆಟ್ ಟೂರ್ನಿಗೆ ಇದು ದಾಖಲೆಯ ಉಪಸ್ಥಿತಿಯಾಗಿದೆ.

2027ರಿಂದ ನಡೆಯಲಿರುವ ಮಹಿಳೆಯರ ಟಿ20 ಚಾಂಪಿಯನ್ಸ್ ಕಪ್‌ ಟೂರ್ನಿಯು ಆರು ತಂಡಗಳನ್ನು ಒಳಗೊಂಡಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.