ADVERTISEMENT

ಟಿ20 ವಿಶ್ವಕಪ್‌: ಆಯೋಜನೆಯ ಪರಾಮರ್ಶೆಗೆ ತ್ರಿಸದಸ್ಯರ ಸಮಿತಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 18:08 IST
Last Updated 22 ಜುಲೈ 2024, 18:08 IST
icc logo
icc logo   

ಕೊಲಂಬೊ (ಪಿಟಿಐ): ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್‌ನಲ್ಲಿ ಅನಗತ್ಯ ನಷ್ಟ, ಪಿಚ್‌ಗಳ ಕಳಪೆ, ಆಟಗಾರರಿಗೆ ಎದುರಾದ ಪ್ರಯಾಣದ ಬವಣೆ  ಪರಿಶೀಲಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ತ್ರಿಸದಸ್ಯರ ಸಮಿತಿಯನ್ನು ರಚಿಸಿದೆ.

ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರೋಜರ್ ಟೂಸ್‌, ಐಸಿಸಿಯ ಉಪಾಧ್ಯಕ್ಷರಾದ ಇಮ್ರಾನ್ ಖ್ವಾಜಾ ಮತ್ತು ಲಾಸನ್ ನೈಡೂ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.

‘ಐಸಿಸಿ ಟಿ20 ವಿಶ್ವಕಪ್ ಆಯೋಜನೆಯಲ್ಲಿ ಆದ ವ್ಯತ್ಯಾಸಗಳ ಬಗ್ಗೆ ಈ ಸಮಿತಿಯು ಪರಿಶೀಲನೆ ನಡೆಸಲಿದೆ. ಈ ಸಮಿತಿಯು ವರ್ಷದ ನಂತರ ಮಂಡಳಿಗೆ ವರದಿ ನೀಡಲಿದೆ’ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ADVERTISEMENT

ನ್ಯೂಯಾರ್ಕ್, ಫ್ಲೋರಿಡಾ ಮತ್ತು ಡಲಾಸ್‌ನಲ್ಲಿ ಪಂದ್ಯಗಳನ್ನು ನಡೆಸಿದ್ದರಿಂದ ಐಸಿಸಿಯು ₹167 ಕೋಟಿಗಿಂತಲೂ ಹೆಚ್ಚಿನ ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ.

ಟೂರ್ನಿಯ ಅಮೆರಿಕದ ಲೆಗ್‌ಗಾಗಿ ಸುಮಾರು ₹1255 ಕೋಟಿ ಬಜೆಟ್‌ ನಿಗದಿಪಡಿಸಲಾಗಿತ್ತು. ಆದರೆ, ಕೆಲವು ಮಂಡಳಿಯ ಪ್ರಭಾವಿ ಸದಸ್ಯರ ಕಾರಣದಿಂದ ಬಜೆಟ್ ಮಿತಿಮೀರಿದೆ ಎಂದು ತಿಳಿದುಬಂದಿದೆ.

ಡ್ರಾಪ್‌ ಇನ್‌ ಪಿಚ್‌ಗಳ ಕಳಪೆ ಗುಣಮಟ್ಟ, ಟಿಕೆಟಿಂಗ್ ಅವ್ಯವಸ್ಥೆ, ಟೆಂಡರ್‌ ಪ್ರಕ್ರಿಯೆ ಮತ್ತು ಆಟಗಾರರ ಪ್ರಯಾಣದ ಬವಣೆ ಬಗ್ಗೆ ಸಮಿತಿಯು ಅಧ್ಯಯನ ನಡೆಸಿ ವರದಿ ನೀಡಲಿದೆ. ಟೂರ್ನಿಯ ನಿರ್ದೇಶಕರಾಗಿದ್ದ ಕ್ರಿಸ್ ಟೆಟ್ಲಿ ಈಗಾಗಲೇ ರಾಜೀನಾಮೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.