ಅಹಮದಾಬಾದ್: ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಪರಿವರ್ತಿತರಾದವರು ಅಂತರರಾಷ್ಟ್ರೀಯ ಮಹಿಳಾ ಟೂರ್ನಿಗಳಲ್ಲಿ ಆಡುವಂತಿಲ್ಲ ಎಂದು ಪ್ರಮುಖ ನಿರ್ಧಾರವೊಂದರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಪ್ರಕಟಿಸಿದೆ.
ಅಂತರರಾಷ್ಟ್ರೀಯ ಮಹಿಳಾ ಟೂರ್ನಿಗಳಲ್ಲಿ ಋಜುತ್ವ ಕಾಪಾಡಲು ಮತ್ತು ಆಟಗಾರ್ತಿಯರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಐಸಿಸಿ ಹೇಳಿದೆ.
ಕ್ರೀಡೆಯ ಭಾಗೀದಾರರ ಜೊತೆ ಸುಮಾರು ಒಂಬತ್ತು ತಿಂಗಳ ಸಮಾಲೋಚನೆ ನಡೆಸಿದ ನಂತರ ಐಸಿಸಿ ಆಡಳಿತ ಮಂಡಳಿಯು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಲಿಂಗಸಂಬಂಧಿ ನೂತನ ನಿಯಮಾವಳಿಗೆ ಅನುಮೋದನೆ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪುರುಷರು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನಂತರ ಮಹಿಳಾ ವಿಭಾಗದಲ್ಲಿ ಸ್ಪರ್ಧೆ ಮಾಡುವ ವಿಷಯ ಕ್ರೀಡಾಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಮಂಗಳವಾರ ಅಹಮದಾಬಾದ್‌ನಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಐಸಿಸಿ ಅಂತಿಮವಾಗಿ ಈ ನಿರ್ಧಾರಕ್ಕೆ ಬಂದಿದೆ.
2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಟವನ್ನು ಸೇರ್ಪಡೆಗೊಳಿಸುವ ಕಾರಣವೂ ಐಸಿಸಿಯ ಈ ಮಹತ್ವದ ನಿರ್ಧಾರ ಹಿಂದೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.
‘ಕ್ರಿಕೆಟ್ ಸಹ ಒಲಿಂಪಿಕ್ ಕ್ರೀಡೆಯಾಗಲಿರುವ ಕಾರಣ, ಅದೂ ಸಹ ಒಲಿಂಪಿಕ್ ನಿಯಮಾವಳಿಗಳ ಅಧೀನಕ್ಕೆ ಬರಲಿದೆ’ ಎಂದು ತಿಳಿಸಿದೆ.
ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ (ವರ್ಲ್ಡ್ ಅಥ್ಲೆಟಿಕ್ಸ್) ಕೂಡ, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಬದಲಾದ ಅಥ್ಲೀಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದೆ. 2023ರ ಮಾರ್ಚ್ 1 ರಿಂದಲೇ ಇದು ಜಾರಿಗೆ ಬಂದಿದೆ. ಈ ವಿಷಯದಲ್ಲಿ ಮಹಿಳಾ ಅಥ್ಲೀಟುಗಳ ಟೆಸ್ಟೊಸ್ಟೆರೋನ್ ಮಟ್ಟವನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ದಕ್ಷಿಣ ಆಫ್ರಿಕಾದ ಓಟಗಾರ್ತಿ ಕಾಸ್ಟೆರ್ ಸೆಮೆನ್ಯಾ ಅವರ ದೇಹದಲ್ಲಿ ಟೆಸ್ಟೊಸ್ಟೆರೋನ್ ಮಟ್ಟ ನಿಗದಿತ ಪ್ರಮಾಣಕ್ಕಿಂತ (ಲೀಟರ್‌ಗೆ 2.5 ನ್ಯಾನೊಮೋಲ್ಸ್‌ಗಿಂತ ಕಡಿಮೆ ಇರಬೇಕು) ಹೆಚ್ಚು ಇದ್ದ ಕಾರಣ ಅವರ ಮೇಲೆ ನಿಷೇಧ ಹೇರಲಾಗಿತ್ತು.
ಸ್ಟಾಪ್ ಕ್ಲಾಕ್‌ಗಳ ಬಳಕೆ:
ಆಟದ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಪುರುಷರ ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸ್ಟಾಪ್ ಕ್ಲಾಕ್‌ಗಳನ್ನು ಪ್ರಾಯೋಗಿಕವಾಗಿ ಬಳಸಲಾಗುವುದು ಎಂದು ಐಸಿಸಿ ಮಂಗಳವಾರ ತಿಳಿಸಿದೆ.
ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ಸ್ಟಾಪ್‌ಕ್ಲಾಕ್‌ಗಳ ಪ್ರಾಯೋಗಿಕ ಬಳಕೆ ನಡೆಯಲಿದೆ. ಬೌಲಿಂಗ್ ಮಾಡುವ ತಂಡ ಒಂದು ಓವರ್ ಮುಗಿದ ನಂತರ 60 ಸೆಕೆಂಡುಗಳ ಅವಧಿಯಲ್ಲಿ ಇನ್ನೊಂದು ಓವರ್ ಆರಂಭಿಸಬೇಕು. ತಂಡ ಮೂರನೇ ಬಾರಿ ತಪ್ಪು ಮಾಡಿದಲ್ಲಿ ಐದು ರನ್‌ಗಳ ಪೆನಾಲ್ಟಿ ವಿಧಿಸಲಾಗುತ್ತದೆ. ಓವರುಗಳ ಮಧ್ಯೆ ತೆಗೆದುಕೊಳ್ಳುವ ಸಮಯ ನಿಯಂತ್ರಿಸಲು ಸ್ಟಾಪ್ ಕ್ಲಾಕ್‌ಗಳ ಬಳಕೆ ಮಾಡಲಾಗುತ್ತದೆ ಎಂದು ಐಸಿಸಿ ಹೇಳಿಕೆ ತಿಳಿಸಿದೆ.
ಏಕದಿನ ಪಂದ್ಯಗಳಲ್ಲಿ ಓವರುಗಳು ನಿಧಾನಗತಿಯಲ್ಲಿ ಆಗುತ್ತಿರುವುದು ಆಗಾಗ ಚರ್ಚೆಯಾಗುತ್ತಿದೆ. ದಂಡ ವಿಧಿಸಿದರೂ ಇದು ನಿಯಂತ್ರಣಕ್ಕೆ ಬಂದಿಲ್ಲ. ಪ್ರಸ್ತುತ ಫೀಲ್ಡಿಂಗ್ ತಂಡ, ಓವರ್‌ಗಳನ್ನು ನಿಗದಿತ ಅವಧಿಯೊಳಗೆ ಮುಗಿಸದಿದ್ದಲ್ಲಿ ಅಂತಿಮ ಓವರ್‌ನಲ್ಲಿ ಒಬ್ಬ ಫೀಲ್ಡರ್ 30 ಗಜ ಪರಿಧಿಯೊಳಗೆ ಬರಬೇಕಾಗುತ್ತದೆ.
ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಏಂಜೆಲೊ ಮ್ಯಾಥ್ಯೂಸ್ ಅವರು ಎರಡು ನಿಮಿಷಗಳ ಒಳಗೆ ಕ್ರೀಸಿಗೆ ಬರದ ಕಾರಣ ಅವರಿಗೆ ‘ಟೈಮ್ಡ್ ಔಟ್’ ಎಂದು ಔಟ್ ನೀಡಲಾಗಿತ್ತು. ಇದು ಚರ್ಚೆಗೆ ಕಾರಣವಾಗಿತ್ತು.
ಟೆನಿಸ್ ಆಟದಲ್ಲೂ ಸ್ಟಾಪ್ ಕ್ಲಾಕ್‌ಗಳ ಬಳಕೆ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.