ನವದೆಹಲಿ: ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಸ್ಥಾನ ಗಳಿಸಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಅವರ ಸಭೆ ನಡೆಯಿತು. ತದನಂತರ ಮಂಗಳವಾರ ಹಂಗಾಮಿ ತಂಡವನ್ನು ಪ್ರಕಟಿಸಲಾಯಿತು. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೆ ತಂಡದ ಪಟ್ಟಿ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದೆ.
ರೋಹಿತ್ ಶರ್ಮಾ ನಾಯಕ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮವಾಗಿ ಆಡಿರುವ ಆಲ್‌ರೌಂಡರ್ ಶಿವಂ ದುಬೆ, ಅಕ್ಷರ್ ಪಟೇಲ್ ಕೂಡ ಸ್ಥಾ ನ ಗಿಟ್ಟಿಸಿದ್ದಾರೆ.
ಆದರೆ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಆಯ್ಕೆ ಪರಿಗಣಿಸಿಲ್ಲ. ರಿಷಭ್ ಪಂತ್ ವಿಕೆಟ್‌ಕೀಪರ್ ಆಗಿದ್ದು, ಎರಡನೇ ವಿಕೆಟ್‌ಕೀಪರ್ ಆಗಿ ಸಂಜು ಸ್ಥಾನ ಗಳಿಸಿದ್ದಾರೆ. ಇಶಾನ್ ಕಿಶನ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.
ಶುಭಮನ್ ಗಿಲ್ ಮೀಸಲು ಪಟ್ಟಿಯಲ್ಲಿದ್ದಾರೆ. ರೋಹಿತ್ ಶರ್ಮಾ ಅವರೊಂದಿಗೆ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
ಮೂವರು ಎಡಗೈ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ, ಅಕ್ಷರ್ ಮತ್ತು ಕುಲದೀಪ್ ಯಾದವ್ ತಂಡದಲ್ಲಿದ್ದಾರೆ. ಎಡಗೈ ವೇಗಿ ಆರ್ಷದೀಪ್ ಕೂಡ ಸ್ಥಾನ ಪಡೆದಿದ್ದಾರೆ.
ಭಾರತ ತಂಡವು ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಭಾರತ ತಂಡ ಇಂತಿದೆ:
1. ರೋಹಿತ್ ಶರ್ಮಾ (ನಾಯಕ)
2. ಯಶಸ್ವಿ ಜೈಸ್ವಾಲ್
3. ವಿರಾಟ್ ಕೊಹ್ಲಿ
4. ಸೂರ್ಯಕುಮಾರ್ ಯಾದವ್
5. ರಿಷಭ್ ಪಂತ್ (ವಿಕೆಟ್ ಕೀಪರ್)
6. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
7. ಹಾರ್ದಿಕ್ ಪಾಂಡ್ಯ (ಉಪನಾಯಕ)
8. ಶಿವಂ ದುಬೆ
9. ರವೀಂದ್ರ ಜಡೇಜ
10. ಅಕ್ಷರ್ ಪಟೇಲ್
11. ಕುಲದೀಪ್ ಯಾದವ್
12. ಯಜುವೇಂದ್ರ ಚಾಹಲ್
13. ಆರ್ಶದೀಪ್ ಸಿಂಗ್
14. ಜಸ್‌ಪ್ರೀತ್ ಬೂಮ್ರಾ
15. ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು:
ಶುಭಮನ್ ಗಿಲ್, ಖಲೀಲ್ ಅಹಮದ್, ರಿಂಕು ಸಿಂಗ್ ಮತ್ತು ಆವೇಶ್ ಖಾನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.