ADVERTISEMENT

ಐಸಿಸಿ ಏಕದಿನ ರ‍್ಯಾಂಕಿಂಗ್‌: 2, 3ನೇ ಸ್ಥಾನದಲ್ಲಿ ಕೊಹ್ಲಿ, ಶರ್ಮಾ

​ಪ್ರಜಾವಾಣಿ ವಾರ್ತೆ
Published 26 ಮೇ 2021, 14:09 IST
Last Updated 26 ಮೇ 2021, 14:09 IST
ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ
ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ   

ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 2, 3ನೇ ಸ್ಥಾನವನ್ನು ಕ್ರಮವಾಗಿ ಹಂಚಿಕೊಂಡಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬೂಮ್ರಾ 5ನೇ ಕ್ರಮಾಂಕದಲ್ಲೇ ಉಳಿದಿದ್ದಾರೆ. ಆಲ್‌ರೌಂಡರ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ರವೀಂದ್ರ ಜಡೇಜಾ 9ನೇ ಸ್ಥಾನ ಪಡೆದಿದ್ದಾರೆ.

ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್‌ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಲಾಗಿದ್ದು, 865 ರೇಟಿಂಗ್‌ ಅಂಕಗಳನ್ನು ಹೊಂದಿರುವ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಬಾಬರ್‌ ಆಜಂ ಮೊದಲ ಸ್ಥಾನ ಪಡೆದಿದ್ದಾರೆ. ಕೋಹ್ಲಿ ಮತ್ತು ಶರ್ಮಾ ಕ್ರಮವಾಗಿ 857 ಮತ್ತು 825 ಅಂಕಗಳನ್ನು ಹೊಂದಿದ್ದಾರೆ.

690 ಅಂಕಗಳನ್ನು ಹೊಂದಿರುವ ಬುಮ್ರಾ ಬೌಲಿಂಗ್‌ ವಿಭಾಗದಲ್ಲಿ 5ನೇ ರ‍್ಯಾಂಕ್ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ 737 ಅಂಕಗಳೊಂದಿಗೆ ಅಗ್ರಗಣ್ಯರಾಗಿದ್ದಾರೆ. ಬಾಂಗ್ಲಾದೇಶದ ಮೆಹಿದಿ ಹಸನ್‌ 725 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಅಫಘಾನಿಸ್ತಾನದ ಮುಜೀಬ್‌ ಉರ್‌ ರೆಹ್ಮಾನ್‌ ಮತ್ತು ನ್ಯೂಜಿಲೆಂಡ್‌ನ ಮ್ಯಾಟ್‌ ಹೆನ್ರಿ ಇದ್ದಾರೆ. ಇಬ್ಬರು ಕ್ರಮವಾಗಿ 708, 691 ಅಂಕಗಳನ್ನು ಹೊಂದಿದ್ದಾರೆ.

ADVERTISEMENT

ಟಾಪ್‌ 5ರಲ್ಲಿ ಸ್ಥಾನ ಪಡೆದ ಬಾಂಗ್ಲಾದ 3ನೇ ಆಟಗಾರ

ಇದುವರೆಗೆ ಐಸಿಸಿಯ ಅಗ್ರ ಐದರ ಪಟ್ಟಿಯಲ್ಲಿ ಸ್ಥಾನ ಪಡೆದ ಬಾಂಗ್ಲಾದೇಶದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಹಸನ್‌ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ವರ್ಲ್ಡ್‌ ಕಪ್‌ ಸೂಪರ್‌ ಲೀಗ್‌ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಮೊದಲ ಪಂದ್ಯದಲ್ಲಿ 30ಕ್ಕೆ 4 ಮತ್ತು ಎರಡನೇ ಪಂದ್ಯದಲ್ಲಿ 28ಕ್ಕೆ 3 ವಿಕೆಟ್‌ ಕಬಳಿಸುವ ಮೂಲಕ ಐಸಿಸಿ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಏರಿದ್ದಾರೆ.

ಬಾಂಗ್ಲಾದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ 2009ರಲ್ಲಿ ಮೊದಲ ಬಾರಿಗೆ ಐಸಿಸಿ ಶ್ರೇಯಾಂಕದ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದರು. 2010ರಲ್ಲಿ ಎಡಗೈ ಸ್ಪಿನ್ನರ್‌ ಅಬ್ದುರ್‌ ರಜಾಕ್‌ 2ನೇ ಸ್ಥಾನ ಪಡೆದಿದ್ದರು. ಟಾಪ್‌ 10ರಲ್ಲಿ ಸ್ಥಾನ ಪಡೆದಿರುವ ಬಾಂಗ್ಲಾದ ಎಡಗೈ ವೇಗಿ ಮುಸ್ತಾಫಿಜುರ್‌ ರೆಹ್ಮನ್‌ 8ರಿಂದ 9ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ.

ಐಸಿಸಿ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌ ಪಟ್ಟಿ
1. ಬಾಬರ್‌ ಆಜಂ, ಪಾಕಿಸ್ತಾನ (865)
2. ವಿರಾಟ್‌ ಕೊಹ್ಲಿ, ಭಾರತ (857)
3. ರೋಹಿತ್‌ ಶರ್ಮಾ, ಭಾರತ (825)
4. ರಾಸ್‌ ಟೇಲರ್‌, ನ್ಯೂಜಿಲೆಂಡ್‌ (801)
5. ಆ್ಯರನ್‌ ಫಿಂಚ್‌, ಆಸ್ಟ್ರೇಲಿಯಾ (791)
6. ಜಾನಿ ಬೈರ್ಸ್ಟೌ, ಇಂಗ್ಲೆಂಡ್‌ (785)
7. ಫಕರ್‌ ಜಮಾನ್‌, ಪಾಕಿಸ್ತಾನ (778)
8. ಫ್ರಾಕೊಯ್ಸ್‌ ಡುಪ್ಲೆಸಿಸ್‌, ದಕ್ಷಿಣ ಆಫ್ರಿಕಾ (778)
9. ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯಾ (773)
10. ಶಾಯ್‌ ಹೋಪ್‌, ವೆಸ್ಟ್‌ ಇಂಡೀಸ್‌ (773)

ಐಸಿಸಿ ಏಕದಿನ ಬೌಲಿಂಗ್‌ ರ‍್ಯಾಂಕಿಂಗ್‌ ಪಟ್ಟಿ
1. ಟ್ರೆಂಟ್‌ ಬೌಲ್ಟ್‌, ನ್ಯೂಜಿಲೆಂಡ್‌ (737)
2. ಮೆಹೆದಿ ಹಸನ್‌, ಬಾಂಗ್ಲಾದೇಶ (725)
3. ಮುಜೀಬ್‌ ಉರ್‌ ರೆಹ್ಮನ್‌, ಅಫಘಾನಿಸ್ತಾನ (708)
4. ಮ್ಯಾಟ್‌ ಹೆನ್ರಿ, ನ್ಯೂಜಿಲೆಂಡ್‌ (691)
5. ಜಸ್‌ಪ್ರೀತ್‌ ಬೂಮ್ರಾ, ಭಾರತ (690)
6. ಕಗಿಸೊ ರಬಾಡ, ದಕ್ಷಿಣ ಆಫ್ರಿಕಾ (666)
7. ಕ್ರಿಸ್‌ ವೋಕ್ಸ್‌, ಇಂಗ್ಲೆಂಡ್‌ (665)
8. ಜೋಶ್‌ ಹ್ಯಾಜಲ್‌ವುಡ್‌, ಆಸ್ಚ್ರೇಲಿಯಾ (660)
9. ಮುಸ್ತಾಫಿಜುರ್‌ ರೆಹ್ಮನ್‌, ಬಾಂಗ್ಲಾದೇಶ (652)
10. ಪ್ಯಾಟ್‌ ಕಮಿನ್ಸ್‌, ಆಸ್ಟ್ರೇಲಿಯಾ (646)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.