ದುಬೈ: ಕಳೆದ ಭಾನುವಾರ ಮಕ್ತಾಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರು ಐಸಿಸಿಯ ತಾಜಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಮೂರನೇ ಸ್ಥಾನಕ್ಕೆ ಏರಿದ್ದಾರೆ. ಆರಂಭ ಆಟಗಾರ ಶುಭಮನ್ ಗಿಲ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ವಿಶ್ವಕಪ್‌ನಲ್ಲಿ ಒಟ್ಟು 765 ರನ್ ಕಲೆಹಾಕಿದ್ದ ಕೊಹ್ಲಿ 791 ರ‍್ಯಾಂಕಿಂಗ್ ಪಾಯಿಂಟ್ ಗಳಿಸಿದ್ದಾರೆ. ಗಿಲ್ 826 ಪಾಯಿಂಟ್ಸ್ ಗಳಿಸಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಜಂ (824 ರೇಟಿಂಗ್ ಪಾಯಿಂಟ್ಸ್) ಎರಡನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್‌ನಲ್ಲಿ 597 ರನ್ ಕಲೆಹಾಕಿ ಉತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಅವರೂ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದು ನಾಲ್ಕನೇ ಸ್ಥಾನಕ್ಕೆ (769 ರೇಟಿಂಗ್ ಪಾಯಿಂಟ್ಸ್) ಏರಿದ್ದಾರೆ.
ವಿಶ್ವಕಪ್‌ನಲ್ಲಿ ಮೂರು ಶತಕ ಹೊಡೆದಿದ್ದ ಕೊಹ್ಲಿ, 50ನೇ ಶತಕ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ಗರಿಷ್ಠ ಏಕದಿತ ಶತಕಗಳ ದಾಖಲೆಯನ್ನು ಮುರಿದಿದ್ದರು.
ಕೊಹ್ಲಿ ಈ ಹಿಂದೆ, 2017 ರಿಂದ 2021ರ ಅವಧಿಯಲ್ಲಿ ರ‍್ಯಾಂಕಿಂಗ್‌ನಲ್ಲಿ ಸತತವಾಗಿ 1258 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದರು. ನಂತರ ಬಾಬರ್ ಆಜಂ ಅಗ್ರಸ್ಥಾನಕ್ಕೇರಿದ್ದರು.
ಕ್ವಿಂಟನ್ ಡಿ ಕಾಕ್ ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಶತಕ (137) ಹೊಡೆದು ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ಟ್ರಾವಿಡ್ ಹೆಡ್ 28 ಸ್ಥಾನಗಳಷ್ಟು ಭಾರಿ ಬಡ್ತಿ ಪಡೆದು 15ನೇ ಸ್ಥಾನಕ್ಕೇರಿದ್ದಾರೆ.
ಬೌಲರ್‌ಗಳ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರು ಮೂರು ಮತ್ತು ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇಬ್ಬರೂ ವಿಶ್ವಕಪ್‌ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು. ಸ್ಪಿನ್ನರ್‌ಗಳಾದ ಭಾರತದ ಕುಲದೀಪ್ ಯಾದವ್ ಮತ್ತು ಅಫ್ಗಾನಿಸ್ತಾನದ ರಶೀದ್ ಖಾನ್ ಅವರು ಜಂಟಿಯಾಗಿ ಆರನೇ ಸ್ಥಾನ ಹಂಚಿಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ 10ನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರು ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಆಲ್‌ರೌಂಡರ್‌ಗಳ ವಿಭಾಗದಲ್ಲಿ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್, ಅಫ್ಗಾನಿಸ್ತಾನದ ಮೊಹಮ್ಮದ್ ನಬಿ, ಜಿಂಬಾಬ್ವೆಯ ಸಿಕಂದರ್ ರಝಾ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಮವಾಗಿ ಮೊದಲ ನಾಲ್ಕು ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.