ದುಬೈ: ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೊಯ್ ಅವರು ಐಸಿಸಿ ಟಿ20 ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಇತ್ತೀಚೆಗಷ್ಟೇ ಆಸೀಸ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಭಾರತವು 4-1 ಅಂತರದಿಂದ ಗೆದ್ದಿದ್ದು, ಇದರಲ್ಲಿ ರವಿ ಬಿಷ್ಣೊಯ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗಳಿಸಿದ್ದರು. 23ರ ಹರೆಯದ ಬಿಷ್ಣೊಯ್ 5 ಪಂದ್ಯಗಳಿಂದ 9 ವಿಕೆಟ್ ಕಬಳಿಸಿದ್ದರು.
699 ರೇಟಿಂಗ್ ಪಾಯಿಂಟ್ಸ್ ಪಡೆದ ಬಿಷ್ಣೊಯ್ ಅವರು ಅಫ್ಗಾನಿಸ್ತಾನದ ರಶೀದ್ ಖಾನ್ (692) ರನ್ನು ಹಿಂದಿಕ್ಕಿ ಅಗ್ರ ಪಟ್ಟಕ್ಕೇರಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ವಣಿಂದು ಹಸರಂಗ ಮತ್ತು ಇಂಗ್ಲೆಂಡ್‌ನ ಅದಿಲ್ ರಶೀದ್ ಇಬ್ಬರೂ 679 ಅಂಕಗಳೊಂದಿಗೆ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಶ್ರೀಲಂಕಾದ ಮಹೀಷ ತೀಕ್ಷಣ (677) ಅವರು ಅಗ್ರ ಐದು ಬೌಲರ್‌ಗಳ ಪಟ್ಟಿಯಲ್ಲಿದ್ದು, ಟಾಪ್ 10 ಪಟ್ಟಿಯಲ್ಲಿರುವ ಏಕೈಕ ಭಾರತೀಯ ರವಿ ಬಿಷ್ಣೊಯ್. ಅಕ್ಷರ್ ಪಟೇಲ್ ಅವರು 9 ಸ್ಥಾನ ಮೇಲಕ್ಕೇರಿ 18ನೇ ಸ್ಥಾನದಲ್ಲಿದ್ದಾರೆ.
ಸೂರ್ಯಕುಮಾರ್ ಅಗ್ರ ಬ್ಯಾಟ್ಸ್‌ಮನ್
ಇದೇ ವೇಳೆ, ಆಸೀಸ್ ವಿರುದ್ಧ 4-1 ಅಂತರದ ಸರಣಿ ವಿಜಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಭಾರತದ ಆರಂಭಿಕ ಆಟಗಾರ ಋತುರಾಜ್ ಗಾಯಕವಾಡ ಒಂದು ಸ್ಥಾನ ಕುಸಿತ ಕಂಡು 7ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಆಟವಾಡದೆ ಹೊರಗುಳಿದಿದ್ದ ಭಾರತದ ಹಾರ್ದಿಕ್ ಪಾಂಡ್ಯ ಅವರು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.