ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಬೌಲರ್‌ಗಳ ತಾಜಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ ಅವರನ್ನು ಹಿಂದಿಕ್ಕಿರುವ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಇದರೊಂದಿಗೆ ಬೂಮ್ರಾ ಅವರಿಗೆ ಅಗ್ರಸ್ಥಾನ ನಷ್ಟವಾಗಿದೆ. ಎರಡು ಸ್ಥಾನಗಳ ಕುಸಿತ ಕಂಡಿರುವ ಬೂಮ್ರಾ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಮತ್ತೊಂದೆಡೆ ಕಗಿಸೊ ರಬಾಡ ಮೂರು ಸ್ಥಾನಗಳ ಬಡ್ತಿ ಪಡೆದು ಅಗ್ರಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ರಬಾಡ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಸಾಧನೆ ಮಾಡಿದ್ದರು. ಈಚೆಗೆ ಮೀರಪುರದಲ್ಲಿ ನಡೆದಿದ್ದ ಬಾಂಗ್ಲಾದೇಶ ಎದುರಿನ ಟೆಸ್ಟ್‌ನಲ್ಲಿ ಏಳು ವಿಕೆಟ್ ಗಳಿಸಿದ್ದರು.
ಅಶ್ವಿನ್, ಜಡೇಜಾ ಹಿನ್ನಡೆ...
ಭಾರತ ತಂಡದ ಸ್ಪಿನ್ ತಾರೆಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ಎರಡು ಸ್ಥಾನಗಳ ಕುಸಿತ ಕಂಡಿದ್ದು, ಅನುಕ್ರಮವಾಗಿ ನಾಲ್ಕು ಹಾಗೂ ಎಂಟನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಜೋಷ್ ಹ್ಯಾಜಲ್‌ವುಡ್ (847), ಭಾರತದ ಬೂಮ್ರಾ (846) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಜೋಷ್ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಬೂಮ್ರಾ 2 ಸ್ಥಾನ ಕೆಳಗಿಳಿದಿದ್ದಾರೆ. ಆರ್. ಅಶ್ವಿನ್ ನಾಲ್ಕನೇ ಸ್ಥಾನಕ್ಕಿಳಿದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (820) ಐದನೇ ಸ್ಥಾನ ಪಡೆದಿರುವರು.
ಆದರೆ ಪುಣೆಯಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಅವರು ವಿಕೆಟ್ ಪಡೆದಿರಲಿಲ್ಲ. ಅದರಿಂದಾಗಿ ಅವರು ಅಂಕಗಳನ್ನು ಕಳಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಬೆಳಗಿದ್ದ ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ 30 ಸ್ಥಾನಗಳ ಬಡ್ತಿ ಪಡೆದು 44ಕ್ಕೇರಿದ್ದಾರೆ.
ಪಾಕಿಸ್ತಾನ ಸ್ಪಿನ್ನರ್ ನೊಮಾನ್ ಅಲಿ ಅವರು ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಹೊಸ ಆಟಗಾರನಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಅಲಿ ಮಿಂಚಿದ್ದರು.
ತಂಡ ವಿಭಾಗದಲ್ಲಿ ಭಾರತ ತಂಡವು (3498 ಅಂಕ) ಎರಡನೇ ಸ್ಥಾನ ಪಡೆಯಿತು. ಆಸ್ಟ್ರೇಲಿಯಾ (3715 ಅಂಕ) ಮೊದಲ ಸ್ಥಾನಕ್ಕೇರಿದೆ.
ಜೈಸ್ವಾಲ್ ಮುನ್ನಡೆ, ಕೊಹ್ಲಿ-ಪಂತ್ ಹಿನ್ನಡೆ...
ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಒಂದು ಸ್ಥಾನ ಏರಿಕೆ ಕಂಡಿದ್ದು, ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.
ಆದರೆ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಟಾಪ್ 10ರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಪಂತ್ ಐದು ಸ್ಥಾನಗಳ ಕುಸಿತ ಕಂಡು 11 ಮತ್ತು ಕೊಹ್ಲಿ ಆರು ಸ್ಥಾನಗಳ ಕುಸಿತ ಕಂಡು 14ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಅಗ್ರಸ್ಥಾನದಲ್ಲಿದ್ದು, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಎರಡನೇ ಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್ 20ನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್ ವಿಬಾಗದಲ್ಲಿ ಭಾರತದ ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ ಏಳನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಐಸಿಸಿ ಟೆಸ್ಟ್ ಬೌಲರ್‌ಗಳ ಟಾಪ್ 10 ರ‍್ಯಾಂಕಿಂಗ್ ಪಟ್ಟಿ:
ಐಸಿಸಿ ಟೆಸ್ಟ್ ಬ್ಯಾಟರ್‌ಗಳ ಟಾಪ್ 10 ರ‍್ಯಾಂಕಿಂಗ್ ಪಟ್ಟಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.