ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮಣಿಸಿರುವ ಅಮೆರಿಕ ಇತಿಹಾಸ ಬರೆದಿದೆ. ಅಮೆರಿಕದ ಪರ 'ಸೂಪರ್ ಓವರ್' ಮಾಡಿರುವ ಭಾರತ ಮೂಲದ ವೇಗದ ಬೌಲರ್ ಸೌರಭ್ ನೇತ್ರವಾಲ್ಕರ್ ಕೆಲವೇ ಹೊತ್ತಿನಲ್ಲಿ ತಾರೆಯಾಗಿ ಹೊರಹೊಮ್ಮಿದ್ದಾರೆ.
2010ರಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದ ಸೌರಭ್ ಅವರ ಜೀವನ ಯಾತ್ರೆ ತುಂಬಾ ಕುತೂಹಲಕಾರಿಯಾಗಿದೆ. ಈ ಬಾರಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿರುವ ಸೌರಭ್, ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ನ್ಯೂಯಾರ್ಕ್‌ನ ಗ್ರ್ಯಾಂಡ್ ಪ್ರಯರಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಅಮೆರಿಕ ಮೂರು ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಗಳಿಸಲು ಸಾಧ್ಯವಾಯಿತು. ಇದರೊಂದಿಗೆ 'ಟೈ' ಆಗಿದ್ದರಿಂದ ಪಂದ್ಯ ವಿಜೇತರನ್ನು ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ ಒಂದು ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿತು. ಅಮೆರಿಕದ ಪರ ಸೂಪರ್ ಓವರ್ ಎಸೆದ ಸೌರಭ್, ಕೇವಲ 13 ರನ್ ಬಿಟ್ಟುಕೊಡುವ ಮೂಲಕ ಸ್ಮರಣೀಯ ಗೆಲುವು ದಾಖಲಿಸಲು ನೆರವಾದರು.
1991ನೇ ಇಸವಿಯ ಅಕ್ಟೋಬರ್ 16ರಂದು ಮುಂಬೈಯಲ್ಲಿ ಸೌರಭ್ ನೇತ್ರವಾಲ್ಕರ್ ಜನನವಾಯಿತು. 2010ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಬಳಿಕ ಭಾರತ ತಂಡದಲ್ಲಿ ಸ್ಥಾನ ಗಳಿಸುವಲ್ಲಿ ವಿಫಲರಾಗಿದ್ದರು. 2015ರಲ್ಲಿ ಅಮೆರಿಕಕ್ಕೆ ತೆರಳಿದ್ದರು.
ಈ ಮೊದಲು ಮುಂಬೈ ಪರ ರಣಜಿ ಪಂದ್ಯವನ್ನು ಆಡಿದ್ದರು. ಟೀಮ್ ಇಂಡಿಯಾದ ತಾರೆಗಳಾದ ಕೆ.ಎಲ್. ರಾಹುಲ್, ಮಯಂಕ್ ಅಗರ್ವಾಲ್, ಹರ್ಷಲ್ ಪಟೇಲ್, ಜೈದೇವ್ ಉನಾದ್ಕಟ್ ಹಾಗೂ ಸಂದೀಪ್ ಶರ್ಮಾ ಅವರ ಸಹ ಆಟಗಾರನೂ ಆಗಿದ್ದರು.
ಒರಾಕಲ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್...
ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಒರಾಕಲ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸೌರಭ್ ಛಾಪು ಮೂಡಿಸಿದ್ದಾರೆ. ಅಲ್ಲದೆ ಒರಾಕಲ್ ಸಂಸ್ಥೆ ಕೂಡ ಸೌರಭ್ ಸಾಧನೆಯನ್ನು ಕೊಂಡಾಡಿದೆ.
2010ರ ಸೋಲಿಗೆ ಸೇಡು ತೀರಿಸಿದ ಸೌರಭ್...
2010ರಲ್ಲಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಎದುರಾಗಿತ್ತು. ಅಂದು ಕೂಡ ಎದುರಾಳಿ ಪಾಕಿಸ್ತಾನ ತಂಡದಲ್ಲಿ ಬಾಬರ್ ಆಜಂ ಇದ್ದರು ಎಂಬುದು ಗಮನಾರ್ಹ. 14 ವರ್ಷಗಳ ಬಳಿಕ ಅಮೆರಿಕ ತಂಡವನ್ನು ಪ್ರತಿನಿಧಿಸುವ ಮೂಲಕ 32ರ ಹರೆಯದ ಸೌರಭ್ ನೇತ್ರವಾಲ್ಕರ್ ಸೇಡು ತೀರಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.