ADVERTISEMENT

T20 World Cup 2024: ಭಾರತ ತಂಡ ಚಾಂಪಿಯನ್

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ರೋಚಕ ಜಯ: ಭಾರತಕ್ಕೆ ಏಳು ರನ್ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜೂನ್ 2024, 18:03 IST
Last Updated 29 ಜೂನ್ 2024, 18:03 IST
<div class="paragraphs"><p>ಭಾರತ ಆಟಗಾರರ ಸಂಭ್ರಮ</p></div>

ಭಾರತ ಆಟಗಾರರ ಸಂಭ್ರಮ

   

ಬ್ರಿಜ್‌ಟೌನ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಅಂತರದ ಜಯ ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ ಆಯಿತು.

ಈ ಮೂಲಕ ಭಾರತ ಚುಟುಕು ಕ್ರಿಕೆಟ್‌ ವಿಶ್ವಕಪ್‌ ಅನ್ನು ಎರಡನೇ ಭಾರಿಗೆ ಎತ್ತಿ ಹಿಡಿಯಿತು.

ADVERTISEMENT

ಭಾರತ ನೀಡಿದ್ದ 176 ರನ್‌ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಸೂಕ್ತ ಪ್ರತಿರೋಧ ತೋರಿತಾದರೂ ಅಂತಿಮ ಹಂತದಲ್ಲಿ ಎಡವಿತು. ಈ ಮೂಲಕ ಟ್ರೋಫಿ ಭಾರತದ ಪಾಲಾಯಿತು. ಹಾಗೆಯೇ ದಕ್ಷಿಣ ಆಫ್ರಿಕಾ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಉಳಿಸಿಕೊಂಡಿತು.

ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲಷ್ಟೇ ಶಕ್ತವಾಯಿತು. ಟ್ರೋಫಿ ಗೆದ್ದ ಸಂಭ್ರಮದಲ್ಲಿ ಹಾರ್ದಿಕ್ ಪಾಂಡ್ಯ ಕಣ್ಣೀರು ಸುರಿಸಿದರು. ಭಾರತದ ಆಟಗಾರರು ಮೈದಾನದಲ್ಲಿ ನೆರದಿದ್ದ ಅಭಿಮಾನಿಗಳಿಂದ ಭಾರಿ ಸಂಭ್ರಮ ಸ್ವೀಕರಿಸಿದರು.

23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸುತ್ತಿದ್ದ ಹೆನ್ರಿಚ್ ಕ್ಲಾಸೆನ್ ಕ್ರೀಸ್‌ನಲ್ಲಿದ್ದರು. ಆದರೆ 17ನೇ ಓವರ್‌ನಲ್ಲಿ ಹಾರ್ದಿಕ್ ಬೌಲಿಂಗ್‌ನಲ್ಲಿ ಕ್ಲಾಸೆನ್ ಕ್ಯಾಚ್ ಪಡೆದ ವಿಕೆಟ್‌ಕೀಪರ್ ಪಂತ್ ಸಂಭ್ರಮಿಸಿದರು. ಅಲ್ಲಿಂದ ಭಾರತ ತಂಡ ಗೆಲುವಿನ ಹಾದಿಯತ್ತ ಮರಳಿತು.  ಬೂಮ್ರಾ ತಮ್ಮ ಉಳಿದ ಎರಡು ಓವರ್‌ಗಳ ಸ್ಪೆಲ್‌ನಲ್ಲಿ ಬಿಗಿ ದಾಳಿ ನಡೆಸಿದರು. ಅರ್ಷದೀಪ್ ಸಿಂಗ್ ಕೂಡ ಬ್ಯಾಟರ್‌ಗಳನ್ನು ಕಾಡಿದರು. ಕೊನೆಯ ಓವರ್‌ನಲ್ಲಿ ಜಯಕ್ಕಾಗಿ 10 ರನ್‌ಗಳ ಅಗತ್ಯ ದಕ್ಷಿಣ ಆಫ್ರಿಕಾಗೆ ಇತ್ತು. ಆದರೆ ಹಾರ್ದಿಕ್ ಈ ಸವಾಲು ಗೆದ್ದರು. ತಂಡವನ್ನೂ ಗೆಲ್ಲಿಸಿದರು. 

ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕದ (76) ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು.

ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಓವರ್‌ನಲ್ಲಿ ಮೂರು ಬೌಂಡರಿ ಗಳಿಸಿದ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿ ಕಂಡುಬಂದರು.

ಆದರೆ, ಎರಡನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ (9) ಹಾಗೂ ರಿಷಬ್ ಪಂತ್ (0) ಅವರನ್ನು ಹೊರದಬ್ಬಿದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಡಬಲ್ ಆಘಾತ ನೀಡಿದರು. ಸೂರ್ಯಕುಮಾರ್ ಯಾದವ್ (3) ಸಹ ವೈಫಲ್ಯ ಅನುಭವಿಸಿದರು. ಇದರಿಂದಾಗಿ 34 ರನ್ ಗಳಿಸುವಷ್ಟರಲ್ಲಿ ಭಾರತ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಗೂಡಿದ ಕೊಹ್ಲಿ ಹಾಗೂ ಅಕ್ಷರ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಆಸರೆಯಾದರು. ಕೊಹ್ಲಿ-ಅಕ್ಷರ್ ಜೋಡಿ ನಾಲ್ಕನೇ ವಿಕೆಟ್‌ಗೆ 72 ರನ್‌ ಪೇರಿಸಿದರು.

ಆದರೆ 31 ಎಸೆತಗಳಲ್ಲಿ 47 ರನ್ ಗಳಿಸಿದ ಅಕ್ಷರ್ ರನೌಟ್ ಆಗುವ ಮೂಲಕ ಪೆವಿಲಿಯನ್‌ಗೆ ಮರಳಿದರು. ಅಕ್ಷರ್ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸಿದರು.

ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ವಿರಾಟ್, ಟೂರ್ನಿಯಲ್ಲಿ ಮೊದಲ ಅರ್ಧಶತಕದ ಸಾಧನೆ ಮಾಡಿದರು. ಅಲ್ಲದೆ ಒಟ್ಟಾರೆಯಾಗಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 38ನೇ ಅರ್ಧಶತಕ ಗಳಿಸಿದರು.

ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಮೂಲಕ ಕೊಹ್ಲಿ ಗಮನ ಸೆಳೆದರು. ಅಲ್ಲದೆ ಶಿವಂ ದುಬೆ ಅವರೊಂದಿಗೆ ಕೊಹ್ಲಿ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಕೊಹ್ಲಿ 59 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಶಿವಂ ದುಬೆ 27 ರನ್‌ಗಳ (16 ಎಸೆತ, 3 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 5* ಹಾಗೂ ರವೀಂದ್ರ ಜಡೇಜ 2 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾದ ಪರ ಮಹಾರಾಜ್ ಹಾಗೂ ನಾಕಿಯಾ ತಲಾ ಎರಡು ಮತ್ತು ರಬಾಡ ಹಾಗೂ ಜಾನ್ಸೆನ್ ತಲಾ ಒಂದು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.